ಕರ್ನಾಟಕ

ಪಕ್ಷಕ್ಕಾಗಿ ದುಡಿಯದೇ ಅಧಿಕಾರ ಕೇಳಬೇಡಿ: ಕೆಪಿಸಿಸಿ ನೂತನ ಅಧ್ಯಕ್ಷರ ಖಡಕ್ ಮಾತು

ಬೆಂಗಳೂರು(ಜುಲೈ 12): ‘ನಾನು ಯಾವ ನಾಯಕನ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಕಾಂಗ್ರೆಸ್‌ ಪಕ್ಷದ ಪರ. ಪಕ್ಷ ಕಟ್ಟಲು ಸಹಕರಿಸಿದವರಿಗೆ ಮಾತ್ರ ನಾನು ಬೆಂಬಲ ನೀಡುತ್ತೇನೆ. ಪಕ್ಷಕ್ಕಾಗಿ ದುಡಿಯದೆ ಅಧಿಕಾರ ಕೇಳುವವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ’ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಖಡಕ್‌ ಮಾತುಗಳನ್ನಾಡಿದ್ದಾರೆ.

ಎಂಟು ವರ್ಷಗಳ ಸುದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ. ಪರಮೇಶ್ವರ್‌ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ದಿನೇಶ್‌ ಗುಂಡೂರಾವ್‌, ಅಧಿಕಾರ ದೊರೆತರೆ ಮಾತ್ರ ಪಕ್ಷದಲ್ಲಿ ಇರುತ್ತೇನೆ ಇಲ್ಲದಿದ್ದರೆ ಇಲ್ಲ ಎಂಬ ಮನಸ್ಥಿತಿಯನ್ನು ನಾವು ಒಪ್ಪಲು ಸಿದ್ಧರಿಲ್ಲ. ಇಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷ ಉಳಿಸಿ ಬೆಳೆಸಲು ನನಗೆ ಸಹಕಾರ ನೀಡಿದವರಿಗೆ ಮಾತ್ರ ಬೆಂಬಲ ನೀಡುತ್ತೇನೆ. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುತ್ತೇನೆಯೇ ಹೊರತು, ಗತ್ತು ಮಾಡಿಕೊಂಡು ನಾಯಕರ ಸೇವೆಯಲ್ಲಿ ಮುಳುಗುವವರಿಗೆ ಅವಕಾಶ ನೀಡುವುದಿಲ್ಲ ಎಂದು ಮೊದಲ ಭಾಷಣದಲ್ಲೇ ಸ್ಪಷ್ಟಎಚ್ಚರಿಕೆ ರವಾನಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿ ಪ್ರಯತ್ನ ಮುಂದುವರೆಸಬೇಕಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬರುವುದು ಖಚಿತ. ಇದಕ್ಕೆ ಕರ್ನಾಟಕದಿಂದ ಅತಿ ಹೆಚ್ಚು ಸ್ಥಾನ ಗೆಲ್ಲಿಸಬೇಕಿದೆ. ಈ ಮೂಲಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡಬೇಕಿದೆ ಎಂದು ಕರೆ ನೀಡಿದರು.

ಬಿಜೆಪಿ ವಿಚಾರಗಳ ವಿರುದ್ಧ ಮಾತನಾಡುವವರ ಧ್ವನಿ ದಮನಗೊಳಿಸಲಾಗುತ್ತಿದೆ. ಇದೇ ಕಾರಣಕ್ಕೆ ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ರ ಹತ್ಯೆಯಾಗಿದೆ. ಇಂತಹ ಮತೀಯ ಶಕ್ತಿಗಳನ್ನು ದಮನಗೊಳಿಸಲು ಹಾಗೂ ದೇಶದಲ್ಲಿ ಮುಕ್ತ ವಾತಾವರಣ ನಿರ್ಮಿಸಲು ನಾವು ಮುಂದಾಗಬೇಕಿದೆ. ಹೀಗಾಗಿ ಜಾತ್ಯತೀತ ಶಕ್ತಿಗಳನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಕರೆ ನೀಡಿದರು.

ಸೂರ್ಯಚಂದ್ರ ಇರುವವರೆಗೂ ಕಾಂಗ್ರೆಸ್ ಪಕ್ಷ ಇರುತ್ತದೆ : ಖಂಡ್ರೆ

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, 133 ವರ್ಷದ ಸುದೀರ್ಘ ಇತಿಹಾಸದ ಪಕ್ಷವು ಸೂರ್ಯ ಚಂದ್ರರು ಇರುವವರೆಗೂ ಇರುತ್ತದೆ. ಇದನ್ನು ಮತ್ತಷ್ಟುಬಲಿಷ್ಠವಾಗಿ ಕಟ್ಟಲು ನನ್ನದೇ ಆದ ಕಾರ್ಯಕ್ರಮ ಹೊಂದಿದ್ದೇನೆ. ಅವುಗಳನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಮೂಲಕ ಬಿಜೆಪಿಯನ್ನು ಬುಡ ಸಮೇತ ಕಿತ್ತೆಸೆಯುವ ಕೆಲಸ ಮಾಡುತ್ತೇನೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಟೀಕೆ ಮಾಡಲು ವಸ್ತುಗಳೇ ಇರಲಿಲ್ಲ. ಆದರೂ, ಅಪಪ್ರಚಾರ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆದರು. ಇದೀಗ ಲೋಕಸಭೆ ಚುನಾವಣೆ ಡಿಸೆಂಬರ್‌ನಲ್ಲೇ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಸಾಮಾಜಿಕ ಜಾಲತಾಣ ವಿಭಾಗವನ್ನು ಸದೃಢ ಮಾಡಬೇಕಿದೆ. ಇಡೀ ದೇಶದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲಾಗುವುದು ಎಂದು ಹೇಳಿದರು.

ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಗೆಲ್ಲಬೇಕಿದೆ: ಜಿ. ಪರಮೇಶ್ವರ್

ಕೋಮು ಪ್ರಚೋದನೆ ನೀಡುವ ಹಾಗೂ ಸಂವಿಧಾನ ಬದಲಿಸುವ ಮೂಲಕ ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಕಳೆಯಲು ಮುಂದಾಗಿರುವ ಬಿಜೆಪಿಯನ್ನು ಕಿತ್ತೊಗೆದು ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿ ತಮ್ಮ ಕೊನೆಯ ಭಾಷಣ ಮಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್‌, ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಎಲ್ಲಾ ರೀತಿಯಲ್ಲೂ ಅಧಃಪತನಕ್ಕೆ ಜಾರುತ್ತಿದೆ. ಡಾ.ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಸುಭದ್ರ ಅಡಿಪಾಯ ಹೊಂದಿದ್ದ ಆರ್ಥಿಕ ವ್ಯವಸ್ಥೆ ಅಲುಗಾಡತೊಡಗಿದೆ. ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದ ದೇಶ ಅವನತಿಯತ್ತ ಹೆಜ್ಜೆ ಹಾಕಿದೆ. ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಸಂವಿಧಾನ ಬದಲಾದರೆ ಪ್ರಜಾಪ್ರಭುತ್ವ ಹಾಳಾಗುತ್ತದೆ. ಹೀಗಾಗಿ ಕಾಂಗ್ರೆಸ್‌ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದು ಹೇಳಿದರು. (ಎನ್.ಬಿ)

Leave a Reply

comments

Related Articles

error: