ಪ್ರಮುಖ ಸುದ್ದಿ

ನೀರಿನ ಕೊಲ್ಲಿಯಲ್ಲಿ ಬಿದ್ದ ಕಾಡಾನೆ ಉಸಿರುಗಟ್ಟಿ ಸಾವು

ರಾಜ್ಯ(ಮಡಿಕೇರಿ)ಜು.12:- ಕಾಫಿ ತೋಟದ ಸಮೀಪದಲ್ಲಿ ಹರಿಯುವ ನೀರಿನ ಕೊಲ್ಲಿಯಲ್ಲಿ ಬಿದ್ದ ಕಾಡಾನೆ ಉಸಿರುಗಟ್ಟಿ ಸತ್ತಿರುವ ಘಟನೆ ಮಾಲಂಬಿ ಮೀಸಲು ಅರಣ್ಯ ವ್ಯಾಪ್ತಿಯ ಹಿತ್ಲುಮಕ್ಕಿ ಗ್ರಾಮದಲ್ಲಿ ಗುರುವಾರ ಬೆಳಗ್ಗಿನ ಜಾವ ಸಂಭವಿಸಿದೆ.
ಎಂದಿನಂತೆ ಆಹಾರವನ್ನರಸಿ ಕಾಡಾನೆಗಳ ಹಿಂಡು ಬುಧವಾರ ರಾತ್ರಿ ಹಿತ್ಲುಮಕ್ಕಿ ಗ್ರಾಮಕ್ಕೆ ನುಗ್ಗಿ, ಮಾರನೆ ದಿನ ಬೆಳಗ್ಗಿನ ಜಾವ ಲಿಂಗರಾಜು ಎಂಬವರ ಕಾಫಿ ತೋಟದ ಮೂಲಕ ಅರಣ್ಯಕ್ಕೆ ತೆರಳುವ ಸಂದರ್ಭ ಘಟನೆ ಸಂಭವಿಸಿದೆ. 14 ವರ್ಷ ಪ್ರಾಯದ ಹೆಣ್ಣಾನೆ ಕೊಳ್ಳದಲ್ಲಿ ಮುಗ್ಗರಿಸಿ ಬಿದ್ದು, ಕಾಲುಗಳು ಕೆಸರಿನಲ್ಲಿ ಹೂತು, ಸೊಂಡಿಲು ನೀರಿನೊಳಕ್ಕೆ ಮುಳುಗಿದ ಪರಿಣಾಮ ಉಸಿರುಕಟ್ಟಿ ಸತ್ತಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸೋಲಾರ್ ತಂತಿ ಸ್ಪರ್ಶದಿಂದ ಅಘಾತಗೊಂಡ ಕಾಡಾನೆ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ತಜ್ಞವೈದ್ಯರು ಸ್ಪಷ್ಟಪಡಿಸಬೇಕಾಗಿದೆ. ಸಂಜೆ ವೇಳೆಗೆ ಹುಣಸೂರು ಅರಣ್ಯ ಇಲಾಖೆಯ ವೈದ್ಯರಿಂದ ಮೃತದೇಹದ ಪರೀಕ್ಷೆ ನಡೆಯಲಿದೆ.
ಸ್ಥಳಕ್ಕೆ ಎಸಿಎಫ್ ಚಿಣ್ಣಪ್ಪ, ಆರ್‍ಎಫ್‍ಒ ಲಕ್ಷ್ಮೀಕಾಂತ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಾಡಾನೆಗಳ ಹಿಂಡು ಘೀಳಿಡುತ್ತಿರುವುದರಿಂದ ಅರಣ್ಯ ಸಿಬ್ಬಂದಿಗಳ ಪಟಾಕಿ ಸಿಡಿಸಿ, ಕಾಡಾನೆಗಳ ಬರದಂತೆ ಎಚ್ಚರ ವಹಿಸಿದ್ದಾರೆ. ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದರೂ ಜನರು ಕಾಡಾನೆ ಮೃತದೇಹವನ್ನು ನೋಡಲು ತೆರಳುತ್ತಿರುವುದು ಕಂಡು ಬಂತು.
ಇದೊಂದು ಆಕಷ್ಮಿಕ ಘಟನೆಯಾಗಿದ್ದು, ಉಸಿರುಗಟ್ಟಿ ಸತ್ತಿರುವ ಸಂಭವವಿದೆ. ಸುತ್ತಮುತ್ತ ವಿದ್ಯುತ್ ಮಾರ್ಗ ಇಲ್ಲದ ಕಾರಣ, ಯಾವುದೇ ಸಂಶಯವಿಲ್ಲ ಎಂದು ಎಸಿಎಫ್ ಚಿಣ್ಣಪ್ಪ ಹೇಳಿದರು. ದೊಡ್ಡ ದೊಡ್ಡ ಕಂಪನಿ ಎಸ್ಟೇಟ್‍ಗಳಲ್ಲಿ ಸೋಲಾರ್ ತಂತಿ ಬೇಲಿ ಆಳವಡಿಸಿರುವುದರಿಂದ ಕಾಡಾನೆಗಳು ಆಹಾರ ಅರಸಿ ಗ್ರಾಮೀಣ ಭಾಗದ ಸಣ್ಣ ಸಣ್ಣ ಕಾಫಿ ತೋಟಗಳಿಗೆ ನುಗ್ಗಿ ಹೊಟ್ಟೆ ತುಂಬಿದ ನಂತರ ಅರಣ್ಯ ಸೇರಿಕೊಳ್ಳುತ್ತವೆ. ಕಾಡಾನೆಗಳು ಕಾಫಿ ತೋಟಗಳಿಗೆ ನುಗ್ಗದಂತೆ ಕಂದಕ, ಸೋಲಾರ್ ತಂತಿ ಬೇಲಿ ಅಳವಡಿಸಲಾಗಿದೆ. ಅದರೂ ಕೆಲ ಭಾಗಗಳಲ್ಲಿ ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: