ಪ್ರಮುಖ ಸುದ್ದಿ

ಅಕ್ರಮ ಕಲ್ಲುಗಣಿಗಾರಿಕೆಯ ಸ್ಥಳಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಳಿ : ಕೋಟ್ಯಾಂತರ ರೂ.ಮೌಲ್ಯದ ಯಂತ್ರೋಪಕರಣ ಹಾಗೂ ವಾಹನ ಜಪ್ತಿ

ರಾಜ್ಯ(ಹಾಸನ)ಜು.13:- ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ ಚೆಗಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲುಗಣಿಗಾರಿಕೆಯ ಸ್ಥಳಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಳಿ ನಡೆಸಿದ್ದಾರೆ.

ಪರವಾನಗಿ ಪಡೆಯದೇ ಅಕ್ರಮವಾಗಿ ಜೆಲ್ಲಿ ಕ್ರಷರ್ ಸ್ಥಾಪಿಸಿ ಜೆಲ್ಲಿಪುಡಿ ಉತ್ಪಾದಿಸುತ್ತಿರುವುದು ದಾಳಿ ವೇಳೆ ಕಂಡು ಬಂದಿದ್ದು, ಕೋಟ್ಯಾಂತರ ರೂ.ಮೌಲ್ಯದ ಯಂತ್ರೋಪಕರಣ ಹಾಗೂ ವಾಹನಗಳನ್ನು ಜಪ್ತಿಮಾಡಲಾಗಿದೆ. ಚೆಗಳ್ಳಿ ಗ್ರಾಮದ ಸರ್ವೇ ನಂ 58ರಲ್ಲಿ ಬೃಹತ್ ಯಂತ್ರಗಳನ್ನು ಅಳವಡಿಸಿಕೊಂಡು ಅಕ್ರಮ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಜಿಲ್ಲಾಧಿಕಾರಿಗಳೇ ದಿಢೀರ್ ದಾಳಿ ನಡೆಸಿದ್ದಾರೆ. ಸಿ.ಕೆ.ಅರುಣಾಕ್ಷಿ ಕೋಂ ಮೋಹನ್ ಕುಮಾರ್ ಎಂಬವರು ಅಲಂಕಾರಿಕಾ ಶಿಲೆ ಕಲ್ಲುಗಣಿಗಾರಿಕೆಯಿಂದ ಉತ್ಪತ್ತಿಯಾದ ತ್ಯಾಜ್ಯದಿಂದ ಜೆಲ್ಲಿಪುಡಿ ತಯಾರಿಸಲು ಕ್ಲೆರೆನ್ಸ್ ಫಾರ್ ಆಪರೇಶನ್ ಹಾಗೂ ಫಾರಂ-ಸಿ ಪರವಾನಗಿ ಪಡೆಯದೇ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದು,ದಾಳಿ ವೇಳೆ ಕಂಡು ಬಂದಿದೆ. ಅಲಂಕಾರಿಕಾ ಶಿಲೆ ಕಲ್ಲುಗಣಿಗಾರಿಕೆಯಿಂದ ಉತ್ಪತ್ತಿಯಾದ ತ್ಯಾಜ್ಯ ಬಳಸಿಕೊಂಡು ಬೃಹತ್ ಯಂತ್ರಗಳನ್ನು ಉಪಯೋಗಿಸಿ ಅಂದಾಜು 315ಮೆಟ್ರಿಕ್ ಟನ್ ನಷ್ಟು ಜೆಲ್ಲಿಪುಡಿ ತಯಾರಿಸಲಾಗಿದೆ. ಅಲ್ಲದೇ ಸುಮಾರು 5.10ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಳ್ಳಲಾಗಿದ್ದು, ಈ ಪ್ರದೇಶದಲ್ಲಿ ಅಲಂಕಾರಿಕಾ ಶಿಲೆ ಕಲ್ಲು ಗಣಿಗಾರಿಕೆಯ ತ್ಯಾಜ್ಯವನ್ನು ದಾಸ್ತಾನು ಮಾಡಲು ಬಳಸಿಕೊಳ್ಳಲಾಗಿದೆ.

ಪರವಾನಗಿ ಪಡೆಯದೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಲು ಕ್ರಮವಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಸೂಚಿಸಿದ್ದಾರೆ. ಅಲ್ಲದೇ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದುಕೊಳ್ಳುವಂತೆಯೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತಂತೆ ಸಮಗ್ರ ವರದಿಯನ್ನು ಸ್ಥಳ ಪರಿಶೀಲಿಸಿ ಜಂಟಿಯಾಗಿ ನೀಡುವಂತೆ ಹಾಸನ ಉಪವಿಭಾಗಾಧಿಕಾರಿ, ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಹಾಸನ ತಹಶೀಲ್ದಾರ್ ಅವರಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ಅಕ್ರಮ ಗಣಿಗಾರಿಕೆ ಮೇಲೆ ಭಾನುವಾರ ದಾಳಿ ನಡೆಸಿದ್ದರೆ, ಹಾಸನ ಉಪವಿಭಾಗಾಧಿಕಾರಿ ನೇತೃತ್ವದ ತಂಡ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ, ಸರ್ವೇಯರ್ ಗಳೊಂದಿಗೆ ಸೋಮವಾರ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳ ಪರಿಶೀಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: