ಕರ್ನಾಟಕಪ್ರಮುಖ ಸುದ್ದಿ

ದೈಹಿಕ ವಿಕಲಚೇತನರಿಂದ ಅರ್ಜಿ ಆಹ್ವಾನ

ಹಾಸನ (ಜುಲೈ 13): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2018-19ನೇ ಸಾಲಿನಲ್ಲಿ ಜಿಲ್ಲೆ ದೈಹಿಕ ವಿಕಲಚೇತನರಿಗೆ ಉದ್ಯೋಗ ಕೈಗೊಳ್ಳಲು ಅಥವಾ ಅವರು ಉದ್ಯೋಗ ನಿರ್ವಹಿಸುವ ಸ್ಥಳಕ್ಕೆ/ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಿಗೆ ಹೋಗಿ ಬರಲು ಜೀವಿತ ಕಾಲದಲ್ಲಿ ಒಬ್ಬ ಫಲಾನುಭವಿಗೆ ಒಂದು ಬಾರಿಯಂತೆ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ನೀಡಲು ಅವಕಾಶವಿದ್ದು, ಜಿಲ್ಲೆಯ ಶೇ.75%ಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದೈಹಿಕ ವಿಕಲಚೇತನರು ಶೇ. 75% ಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿರಬೇಕು. ಹಾಗೂ ಸೊಂಟದ ಕೆಳಗೆ ಅಂದರೆ ಎರಡು ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡಿರುವ ಎರಡು ಕೈಗಳು ಸ್ವಾಧೀನದಲ್ಲಿರುವ ಹಾಗೂ ಇತರೆ ಎಲ್ಲಾ ರೀತಿಯಲ್ಲಿ ಸದೃಢರಾಗಿರುವ ವಿಕಲಚೇತನರಾಗಿರಬೇಕು.

ಭಾರತದ ಪ್ರಜೆಯಾಗಿದ್ದು ಕರ್ನಾಟಕದಲ್ಲಿ ಕನಿಷ್ಟ 10 ವರ್ಷಗಳು ವಾಸವಾಗಿರಬೇಕು. ತಹಸೀಲ್ದಾರರು/ಸಕ್ಷಮ ಪ್ರಾಧಿಕಾರದ ಪ್ರಮಾಣ ಪತ್ರ ಲಗತ್ತಿಸುವುದು. ಕುಟುಂಬ ವಾರ್ಷಿಕ ಆದಾಯ ರೂ.2.00 ಲಕ್ಷಗಳಿಗಿಂತ ಕಡಿಮೆ ಇರತಕ್ಕದ್ದು. ತತ್ಸಂಬಂಧದ ಪ್ರಮಾಣ ಪತ್ರ ಲಗತ್ತಿಸುವುದು.
20 ರಿಂದ 60ರ ವಯೋಮಾನದ ತೀವ್ರತರನಾದ ದೈಹಿಕ ವಿಕಲಚೇತನರಿಗೆ ಮಾತ್ರ ಜೀವಿತ ಕಾಲದಲ್ಲಿ 1 ಬಾರಿ ಮಾತ್ರ ನೀಡಲು ಅವಕಾಶವಿರುತ್ತದೆ.

ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ಲಗತ್ತಿಸುವುದು. ಅಂಗವಿಕಲರ ಅಧಿನಿಯಮದಲ್ಲಿ ಸೂಚಿಸಿರುವ ಹಾಗೂ ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ಅಂಗವಿಕಲರ ಗುರುತಿನ ಚೀಟಿಯೊಂದಿಗೆ ದೃಢೀಕೃತ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದು.

ಸರ್ಕಾರಿ ಇಲಾಖೆ/ನಿಗಮ/ಮಂಡಳಿ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಥವಾ ಸಂಘ ಸಂಸ್ಥೆಗಳಿಂದ ಯಂತ್ರ ಚಾಲಿತ ದ್ವಿಚಕ್ರ ವಾಹನ ಪಡೆದಿದ್ದಲ್ಲಿ ಅರ್ಹರಾಗಿರುವುದಿಲ್ಲ. ಯಂತ್ರಚಾಲಿತ ದ್ವಿಚಕ್ರವಾಹನವನ್ನು ಅವರ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೆ ಪರಭಾರೆ ಮಾಡಬಾರದು, ಮಾಡಿದ್ದು ಕಂಡು ಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈ ಬಗ್ಗೆ ರೂ.100/-ಗಳ ಛಾಪ ಕಾಗದದಲ್ಲಿ ಪ್ರಮಾಣ ಪತ್ರ ನೀಡತಕ್ಕದ್ದು. ಈ ಸೌಲಭ್ಯ ಪಡೆಯಲಿಚ್ಛಿಸುವ ವಿಕಲಚೇತನರು ದ್ವಿಚಕ್ರ ವಾಹನ ಚಾಲನೆ ಮಾಡುವ ಪರವಾನಗಿ ಪತ್ರ ಕಡ್ಡಾಯವಾಗಿ ಪಡೆದಿರಬೇಕು.

ದೈಹಿಕ ವಿಕಲಚೇತನರು ಆನ್ ಲೈನ್ ಮೂಲಕ ಅರ್ಜಿಗಳನ್ನು welfare of disabled.kar.nic.in ಅಪ್ಲಿಕೇಷನ್ ಲಿಂಕ್‍ನಲ್ಲಿ ದಿನಾಂಕ;31-10-2018ರೊಳಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ನಿಗದಿತ ಆನ್ ಲೈನ್ ಅಫ್ಲಿಕೇಷನ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, 9ನೇ ಕ್ರಾಸ್, ಶಂಕರಮಠ ರಸ್ತೆ, ಕೆ.ಆರ್.ಪುರಂ, ಹಾಸನ ದೂರವಾಣಿ ಸಂಖ್ಯೆ; 08172-264546 ಇವರನ್ನು ಸಂಪರ್ಕಿಸಲು ಕೋರಿದ್ದಾರೆ. (ಎನ್.ಬಿ)

Leave a Reply

comments

Related Articles

error: