ಕರ್ನಾಟಕಪ್ರಮುಖ ಸುದ್ದಿ

ಉತ್ತಮ ಜೀವನ ನಡೆಸಲು ಉತ್ತಮ ಪರಿಸರ ಅವಶ್ಯ: ಹಿರಿಯ ಪತ್ರಕರ್ತ ಎಸ್.ಎನ್.ಅಶೋಕ್‍ ಕುಮಾರ್

ಹಾಸನ (ಜುಲೈ 13): ಮುಂದಿನ ಪೀಳಿಗೆ ಉತ್ತಮ ಜೀವನ ನಡೆಸಲು ಸಹಕಾರಿಯಾಗುವಂತೆ ಉತ್ತಮ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಗಿಡ ನೆಡುವ ಕಾರ್ಯಕ್ರಮವು ಅತ್ಯಂತ ಪ್ರಮುಖವಾದುದು ಎಂದು ಹಿರಿಯ ಪತ್ರಕರ್ತರಾದ ಎಸ್.ಎನ್.ಅಶೋಕ್‍ಕುಮಾರ್ ಹೇಳಿದರು.

ಜೈನಕಾಶಿ ಶ್ರವಣಬೆಳಗೊಳದ ಬಾಹುಬಲಿ ನರ್ಸಿಂಗ್ ಕಾಲೇಜಿನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ನಡೆದ ಪತ್ರಿಕಾ ದಿನಾಚರಣೆ ಮತ್ತು ಪರಿಸರ ದಿನಾಚರಣೆಯ ಅಂಗವಾಗಿ ಗಿಡನೆಡುವ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿ, ಇಂದು ಆಧುನಿಕತೆಗೆ ಮಾರುಹೋಗಿ, ರಸ್ತೆ ಅಗಲೀಕರಣ, ಪೀಠೋಪಕರಣಗಳ ತಯಾರಿಕೆ ಮತ್ತು ಜನಸಂಖ್ಯೆ ಹೆಚ್ಚಳದಿಂದಾಗಿ ಕಾಡುಗಳನ್ನು ನಾಶಪಡಿಸಿ ಭೂಮಿಯ ಅಂತ್ಯಕ್ಕೆ ಕಾರಣರಾಗಿದ್ದೇವೆ ಎಂದರು.

ಜೈನ ತೀರ್ಥಂಕರರು, ಬುದ್ದ ಹಾಗೂ ಇನ್ನು ಅನೇಕರು ತಪಸ್ಸು ಮಾಡಿ ಜ್ಞಾನವನ್ನು ಪಡೆದುಕೊಂಡಿದ್ದಾರೆ, ಅಲ್ಲದೇ ಶೃತಕೇವಲಿ ಭದ್ರಬಾಹು ಮುನಿಗಳು ಮತ್ತು ಅವರೊಡನೆ ಆಗಮಿಸಿದ ಹನ್ನೆರಡು ಸಾವಿರ ಮುನಿಗಳು ತಮ್ಮ ಕೊನೆಯ ದಿನಗಳನ್ನು ಕಳೆಯಲು ಚಂದ್ರಗಿರಿ ಬೆಟ್ಟವನ್ನು ಆಯ್ದುಕೊಳ್ಳಲು ಮುಖ್ಯ ಉದ್ದೇಶ ಇಲ್ಲಿನ ಪರಿಸರ. ಇಂದು ನಾವುಗಳು ಅದನ್ನು ನಾಶ ಮಾಡಿದ್ದೇವೆ ಎಂದು ವಿಷಾದಿಸಿದರು.

ಪರಿಸರವಾದಿ ರಾಘವೇಂದ್ರ ಬೆಕ್ಕ ಅವರು ಮಾತನಾಡಿ, ಕಾರ್ಯಕ್ರಮಗಳಲ್ಲಿ ಮಾಡುವ ಭಾಷಣ ಮತ್ತು ಕಾನೂನು ಹೋರಾಟದಿಂದ ಪರಿಸರವನ್ನು ರಕ್ಷಿಸಲು ಸಾಧ್ಯವಿಲ್ಲ, ಅದಕ್ಕೆ ನಾವೆಲ್ಲರೂ ಮನಸ್ಪೂರ್ತಿಯಾಗಿ ದುಡಿಯಬೇಕು, ನಾವು ಪರಿಸರಕ್ಕೆ ಪೂರಕವಾಗಿರುವ ಮರಗಳನ್ನು ಬೆಳೆಸುವ ಬದಲು. ದುಡ್ಡಿಗಾಗಿ ಮರಗಳನ್ನು ನೆಡುತ್ತಿದ್ದೇವೆ, ಇದರಿಂದ ಪರಿಸರವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಹಿಂದೆ ಶುಭ ಸಂದರ್ಭಗಳಲ್ಲಿ ಮರ-ಗಿಡಗಳನ್ನು ನೆಡುವ ಮೂಲಕ ಆಚರಿಸುತ್ತಿದ್ದರು ಆದರೆ ಇಂದು ಆಡಂಬರ ಜೀವನ ನಡೆಸುತ್ತಿದ್ದೇವೆ ಇದು ನೇರವಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಮುಂದಿನ ದಿನಗಳಲ್ಲಿ ಪರಿಸರ ರಕ್ಷಣೆ ಜೊತೆಗೆ ಅಳಿವಿನ ಅಂಚಿನಲ್ಲಿರುವ ಔಷಧಿ ಗುಣಗಳನ್ನು ಹೊಂದಿರುವ ಗಿಡಗಳನ್ನು ಬೆಳೆಸಲು ಶ್ರಮಿಸಬೇಕು ಎಂದು ತಿಳಿಸಿದರು.

ನಂತರ ಬಾಹುಬಲಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಾನಸ ಅವರು ಮಾತನಾಡಿ, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಇದಕ್ಕೆ ಕಾರಣ ಕಾಡುಗಳ ನಾಶದಿಂದ ಉಂಟಾಗಿರುವ ವಾಯು ಮಾಲಿನ್ಯ ಪ್ರಮುಖವಾಗಿದೆ. ಅಲ್ಲದೇ ಹಿಂದೆ ಮನೆಯ ಬಳಿ ತುಳಸಿ ಗಿಡ ಮತ್ತು ಬೇವಿನ ಎಲೆಗಳ ಸೇವನೆಯಿಂದ ಅನೇಕ ಕಾಯಿಲೆಗಳು ಹತೋಟಿಯಲ್ಲಿದ್ದವು. ಅಲ್ಲದೇ ಅನೇಕ ಕಾಯಿಲೆಗಳಿಗೆ ಇಗಲೂ ಸಸ್ಯಗಳಿಂದ ತಯಾರಿಸಿದ ಔಷಧಿಯನ್ನೇ ನೀಡಲಾಗುತ್ತದೆ, ಹಾಗಾಗಿ ನಾವು ಮನೆಯ ಬಳಿ ಸ್ವಚ್ಛ ಪರಿಸರವನ್ನು ಬೆಳೆಸುವುದು ಮತ್ತು ನೀರನ್ನು ಮಿತವಾಗಿ ಬಳಸುವ ಮೂಲಕ ನಮ್ಮ ಪರಿಸರವನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಹಿರಿಯ ಪತ್ರಕರ್ತರಾದ ಪುಟ್ಟಣ್ಣ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿದರು. ಹಿ.ಕೃ.ಚಂದ್ರು ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮಾ ಪ್ರಭಾಕರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಟಿ.ವೆಂಕಟಸ್ವಾಮಿ, ಚನ್ನರಾಯಪಟ್ಟಣ ತಾಲೂಕು ಪತ್ರಕರ್ತರು ಹಾಗೂ ಬಾಹುಬಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. (ಎನ್.ಬಿ)

Leave a Reply

comments

Related Articles

error: