ಮೈಸೂರು

ವೈದ್ಯರ ನಿರ್ಲಕ್ಷ್ಯದಿಂದ ಎಡಗಾಲು ಸ್ವಾಧೀನ ಕಳೆದುಕೊಂಡ ಮಗು: ಪೋಷಕರಿಂದ ದೂರು ದಾಖಲು

ಮೈಸೂರು ಜಿಲ್ಲೆಯ ನಂಜನಗೂಡಿನ ಖಾಸಗಿ ಆಸ್ಪತ್ರೆಯ ವೈದ್ಯರು ನೆಗಡಿ, ಕಿವಿ ನೋವಿನ ಚಿಕಿತ್ಸೆಗಾಗಿ ಚುಚ್ಚುಮದ್ದು ನೀಡಿದ್ದರಿಂದ ತಮ್ಮ 3 ವರ್ಷದ ಮಗಳಿಗೆ ಎಡಗಾಲು ಸ್ವಾಧೀನ ತಪ್ಪಿ ಅಂಗವೈಕಲ್ಯ ಉಂಟಾಗಿದೆ ಎಂದು ಆರೋಪಿಸಿ ತಾಲೂಕಿನ ಗೋಣ್ಣ ಹಳ್ಳಿಯ ಗಣೇಶ್ ನಗರದ ಪೊಲೀಸ್ ಠಾಣೆಯಲ್ಲಿ ಇತ್ತೀಚಿಗೆ ದೂರು ನೀಡಿದ್ದಾರೆ.

ತಾಲೂಕಿನ ಗೋಣ್ಣ ಹಳ್ಳಿ ಗ್ರಾಮದ  ಗಣೇಶ್ ಪೂರ್ಣಿಮಾ ದಂಪತಿ ಮೇ ತಿಂಗಳಿನಲ್ಲಿ ನಗರದ ರಾಷ್ಟ್ರಪತಿ ರಸ್ತೆಯ ಸಪ್ತಗಿರಿ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ 3 ವರ್ಷದ ಮಗಳು ನಿಖಿತಾಳಿಗೆ ನೆಗಡಿ, ಕಿವಿ ನೋವಿಗೆ ಚಿಕಿತ್ಸೆ ಪಡೆಯಲು ಹೋದಾಗ ಡಾ.ಶ್ರೀಕಾಂತ್ ನಿವಾರಣೆಗಾಗಿ ನೀಡಿದ ಚುಚ್ಚುಮದ್ದಿನಿಂದ ಅಡ್ಡಪರಿಣಾಮ ಉಂಟಾಗಿ ಮಗುವಿನ ಎಡಗಾಲು ಸ್ವಾದೀನ ಕಳೆದುಕೊಂಡಿದೆ. ಇದರ ಬಗ್ಗೆ  ವೈದ್ಯರ ಗಮನಕ್ಕೆ ತಂದಾಗ ಚುಚ್ಚುಮದ್ದಿನ ಪವರ್ ನಿಂದ ಹೀಗಾಗಿದೆ. ಸರಿ ಹೋಗುತ್ತದೆ ಎಂದು ಸಬೂಬು ಹೇಳಿದ್ದಾರೆ. ನಂತರ ಅದನ್ನು ನಾನೇ ಗುಣಪಡಿಸಿ ಕೊಡುತ್ತೇನೆಂದು ಹೇಳಿ ಕೆಲ ದಿನಗಳವರೆಗೆ ಚಿಕಿತ್ಸೆ ನೀಡಿದರೂ 7 ತಿಂಗಳಾದರೂ ಇನ್ನೂ ಗುಣವಾಗಿಲ್ಲ. ಈಗ ಕೇಳಿದರೆ ಉದಾಸೀನದ ಮಾತುಗಳನ್ನಾಡುತ್ತಾ ಕಾಲ ಕಳೆಯುತ್ತಿದ್ದಾರೆ. ನಮ್ಮ ಮಗು ಅಂಗವಿಕಲೆಯಾಗಿ ಇರುವುದನ್ನು ನಮ್ಮ ಕಣ್ಣಿನಿಂದ ನೋಡಲಾಗುತ್ತಿಲ್ಲ ಎಂದು ನಿಖಿತಾಳ ಪೋಷಕರು ತಮ್ಮ ಅಳಲು ತೋಡಿಕೊಂಡರು.

ಈ ಬಗ್ಗೆ  ಗಣೇಶ್ ದಂಪತಿಗಳು ಹಾಗೂ ಜನ ಸಂಗ್ರಾಮ‌ ಪರಿಷತ್ ನ ಸಂಚಾಲಕ ನಗರ್ಲೆ ವಿಜಯ್ ಕುಮಾರ್, ಆರೋಗ್ಯಾಧಿಕಾರಿ ಡಾ.ಕಲಾವತಿಯವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿ ಮಾತನಾಡಿದ ಆರೋಗ್ಯ ಅಧಿಕಾರಿ ಕಲಾವತಿ, ಈ ವಿಚಾರವನ್ನು ಪತ್ರ ಬರೆದು ಮೇಲಧಿಕಾರಿಗಳಿಗೆ  ತಿಳಿಸಲಾಗುವುದು.  ವೈದ್ಯರ ಲೋಪ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Leave a Reply

comments

Related Articles

error: