ಕರ್ನಾಟಕಪ್ರಮುಖ ಸುದ್ದಿ

ಬೆಳ್ಳಂದೂರು ಕೆರೆ ಮಾಲಿನ್ಯ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತೀವ್ರ ತರಾಟೆ

ಬೆಂಗಳೂರು (ಜುಲೈ 13): ಬೆಳ್ಳಂದೂರು ಕೆರೆಯ ಮಾಲಿನ್ಯ ತಡೆ ವಿಚಾರದಲ್ಲಿ ಕ್ರಮ ಕೈಗೊಳ್ಳದ ಸರಕಾರವನ್ನು ಹೈಕೋರ್ಟ್‌ ವಿಭಾಗೀಯ ಪೀಠ ಗುರುವಾರ ತರಾಟೆಗೆ ತೆಗೆದುಕೊಂಡಿದೆ. ಸಂಸದ ಕುಪೇಂದ್ರ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಎಚ್‌.ಜಿ.ರಮೇಶ್‌ ಮತ್ತು ನ್ಯಾ.ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ಪೀಠ, ಬೆಳ್ಳಂದೂರು ಕೆರೆಯಲ್ಲಿ ಮಾಲಿನ್ಯ ಮುಂದುವರಿದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಯಾವ ಇಲಾಖೆಗೆ ಅಥವಾ ಯಾವ ವ್ಯಕ್ತಿಗೆ ಹೊಣೆ ಹೊರುವ ಸಾಮರ್ಥ್ಯ‌ವಿದೆ? ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬಲ್ಲ ತಾಂತ್ರಿಕ ಜ್ಞಾನ ಹೊಂದಿರುವ ತಜ್ಞರು ಯಾರಿದ್ದಾರೆ? ರಾಜ್ಯ ಸರಕಾರಕ್ಕೆ ಕೆರೆ ಶುಚಿಗೊಳಿಸುವ ಉತ್ಸಾಹ ಇಲ್ಲವೇ? ಇಷ್ಟು ಸಣ್ಣ ಕೆಲಸಕ್ಕೆ ಅಷ್ಟು ದೊಡ್ಡ ಸರಕಾರಕ್ಕೆ ಮೂರು ವರ್ಷವಾದರೂ ಸಾಧ್ಯವಾಗಿಲ್ಲವೇ? ಎಂಬ ಗಂಭೀರ ಪ್ರಶ್ನೆಗಳನ್ನು ಹೈಕೋರ್ಟ್ ಪೀಠ ಕೇಳಿತು.

ಸರಕಾರ ಇಂಥ ಸಣ್ಣ ಕೆಲಸವನ್ನೇ ಮಾಡಿಲ್ಲವೆಂದಾದರೆ ಮತ್ತಿನ್ಯಾವ ಕೆಲಸ ಮಾಡಲು ಸಾಧ್ಯ? ಯಾವ ಅಧಿಕಾರಿಗಳಿಗೆ ಈ ಕೆಲಸ ವಹಿಸಲಾಗಿದೆ? ತಜ್ಞರ ನೆರವನ್ನು ಪಡೆಯುತ್ತಿಲ್ಲವೇ? ಸರಕಾರಕ್ಕೆ ಕೆರೆ ಬಗ್ಗೆ ಕಾಳಜಿ ಇಲ್ಲವೇ? ಎಂದು ಸರ್ಕಾರವನ್ನು ನ್ಯಾಯಪೀಠವು ತೀವ್ರ ತರಾಟೆಗೆ ತೆಗೆದುಕೊಂಡಿತು.

ಶುಕ್ರವಾರ ಈ ಸಂಬಂಧ ಸರಕಾರದ ಪ್ರತಿನಿಧಿ ಖುದ್ದು ಹಾಜರಿರಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪಿ.ರಾಮ್‌ಪ್ರಸಾದ್‌, ‘‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ನಿರ್ದೇಶನದಂತೆ ಇತ್ತೀಚೆಗೆ ಕೆರೆಗೆ ಭೇಟಿ ನೀಡಲಾಗಿತ್ತು. ನಿಜಕ್ಕೂ ಕೆರೆ ದುಸ್ಥಿತಿಯಲ್ಲಿದೆ. ಕೆರೆ ದುರ್ನಾತ ಬೀರುತ್ತಿದ್ದು, ನೊರೆ ಉಕ್ಕಿ ಹರಿಯುತ್ತಿದೆ. ಜೊತೆಗೆ ಕೆರೆಯಲ್ಲಿ ಕಡಿಮೆ ನೀರಿದೆ, ಶೇ.70ರಿಂದ 75ರಷ್ಟು ಹೂಳು ತುಂಬಿದೆ. ಕೆರೆಯ ಹೂಳು ತೆಗೆಯದಿರುವುದೇ ಇದಕ್ಕೆಲ್ಲಾ ಕಾರಣ’’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

2015ರಲ್ಲಿ ಸಂಸದ ಕುಪೇಂದ್ರ ರೆಡ್ಡಿ, ‘‘ಬೆಳ್ಳಂದೂರು ಕೆರೆ ಹೆಚ್ಚು ಮಲಿನವಾಗಿದೆ. ತಜ್ಞರ ಸಮಿತಿ ಆ ಮಾಲಿನ್ಯ ತಡೆಗೆ ಹಲವು ಪರಿಹಾರಗಳನ್ನು ಸೂಚಿಸಿದ್ದರೂ ಸಹ ಬಿಡಿಎ ಯಾವುದೇ ಕ್ರಮ ಕೈಗೊಳ್ಳದೆ, ಕೆರೆ ಸುತ್ತಮುತ್ತ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುತ್ತಲೇ ಇದೆ’’ ಎಂದು ಅರ್ಜಿ ಸಲ್ಲಿಸಿದ್ದರು.

ಇದನ್ನು ಪರಿಗಣಿಸಿದ್ದ ನ್ಯಾಯಾಲಯ ಬೆಳ್ಳಂದೂರು ಕೆರೆಯ ಸುತ್ತಮುತ್ತ ಬಿಡಿಎ ಹಾಗೂ ಬಿಬಿಎಂಪಿ ಯಾವುದೇ ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರು ಮಾಡಬಾರದು ಎಂದು ಮಧ್ಯಾಂತರ ಆದೇಶ ನೀಡಿತ್ತು. ಅದನ್ನು ಆಧರಿಸಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 2017ರ ಮೇ 14ರಂದು ಆದೇಶ ಹೊರಡಿಸಿದೆ. ಆನಂತರ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ‍್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿದೆ. ಆದರೂ ಏನೂ ಕ್ರಮ ಕೈಗೊಂಡಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ. (ಎನ್.ಬಿ)

Leave a Reply

comments

Related Articles

error: