ಕರ್ನಾಟಕಪ್ರಮುಖ ಸುದ್ದಿ

ವಕ್ಫ್ ಆಸ್ತಿ ಅಕ್ರಮ ಸಿಬಿಐ ತನಿಖೆಗೆ ಒತ್ತಾಯ: ಸಚಿವ ಜಮೀರ್ ದ್ವಂದ್ವ ನಿಲುವಿಗೆ ವಿರೋಧ

ಬೆಂಗಳೂರು/ವಿಧಾನ ಪರಿಷತ್‍ (ಜುಲೈ 13): ಪ್ರಭಾವಿ ಮುಸ್ಲಿಂ ನಾಯಕರೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಗುರುವಾರ ಮತ್ತೆ ವಿಧಾನಪರಿಷತ್ತಿನಲ್ಲಿ ಪ್ರಸ್ತಾಪವಾಗಿ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಲಾಯಿತು.

ಸಿಬಿಐ ತನಿಖೆ ಒತ್ತಾಯಕ್ಕೆ ಸಚಿವ ಜಮೀರ್‌ ಮೊದಲು ಆಗಬಹುದು ಎಂದರೂ ಸ್ವಲ್ಪ ಸಮಯದ ಬಳಿಕ ನೋಡೋಣ ಎಂಬ ಹೇಲಿದರು. ಈ ಗೊಂದಲ ನಿವಾರಿಸುವಂತೆ ಸದಸ್ಯರು ಪಟ್ಟು ಹಿಡಿದಾಗ ಕಡತ ಪರಿಶೀಲಿಸಿ ರೂಲಿಂಗ್‌ ನೀಡುವುದಾಗಿ ಸಭಾಪತಿ ಪ್ರಕಟಿಸಿದರು.

ಅನ್ವರ್‌ ಮಾನಪ್ಪಾಡಿ ವರದಿಯಂತೆ ವಕ್ಫ್ ಆಸ್ತಿ ಅಕ್ರಮ ಕುರಿತಂತೆ ಸಿಬಿಐ ತನಿಖೆ ನಡೆಸುವ ವಿಚಾರದಲ್ಲಿ ಆಹಾರ, ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಉಲ್ಟಾ ಹೊಡೆದ ಪ್ರಸಂಗವೂ ಸದನದಲ್ಲಿ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಅರುಣ ಶಹಪುರ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವ ಜಮೀರ್‌ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ ಅವರು ಅಧಿಕಾರಾವಧಿ ಪೂರ್ಣಗೊಂಡ ಒಂದೂವರೆ ತಿಂಗಳ ಬಳಿಕ ವರದಿ ನೀಡಿದ್ದಾರೆ. ಆಗ ಬಿಜೆಪಿ ಅಧಿಕಾರದಲ್ಲಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಹೈಕೋರ್ಟ್‌ ನಿರ್ದೇಶನದಂತೆ ಉಭಯ ಸದನಗಳಲ್ಲಿ ವರದಿ ಮಂಡನೆಯಾಗಿದೆ. ವರದಿ ಸಮರ್ಥನೀಯವಾಗಿಲ್ಲ ಎಂಬ ಕಾರಣಕ್ಕೆ ಸಚಿವ ಸಂಪುಟ ತಿರಸ್ಕರಿಸಿದೆ. ಇಷ್ಟಾದರೂ, ವಕ್ಫ್ ಆಸ್ತಿ ದುರ್ಬಳಕೆ ನಿಜವೇ ಆಗಿದ್ದಲ್ಲಿ ಕೇಂದ್ರ ಸರಕಾರ ಸಿಬಿಐ ತನಿಖೆ ನಡೆಸಬಹುದಿತ್ತು ಎಂದು ಹೇಳಿದರು.

ವಕ್ಫ್ ಆಸ್ತಿ ದುರ್ಬಳಕೆ ಆಗಿಲ್ಲವೆಂದಾರೆ ತನಿಖೆಗೆ ಏಕೆ ಹೆದರಬೇಕು? ಪ್ರಭಾವಿ ಮುಸ್ಲಿಂ ನಾಯಕರಿಗೆ ಏಕೆ ಭಯ? ಸಿಬಿಐ ತನಿಖೆಗೆ ಶಿಫಾರಸು ಮಾಡಬಹುದಲ್ಲ ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಲಹೆ ಮಾಡಿದರು.

ಈ ಸಲಹೆಗೆ ಸಚಿವ ಜಮೀರ್‌, ಆಗಬಹುದು ಎಂದರು. ಸಭಾಪತಿ ಹೊರಟ್ಟಿ ಅವರು, ಸಿಬಿಐ ತನಿಖೆಗೆ ಶಿಫಾರಸು ಮಾಡಲು ಸಚಿವರು ಒಪ್ಪಿದ್ದಾರೆ ಎಂದು ಹೇಳಿ ಚರ್ಚೆ ಅಂತ್ಯಗೊಳಿಸಿದರು.

ಇದಾದ ಸ್ವಲ್ಪ ಸಮಯದ ಬಳಿಕ ಕಾಂಗ್ರೆಸ್‌ನ ಜಬ್ಬರ್‌ ಅವರು, ವಕ್ಫ್ ಆಸ್ತಿ ದುರ್ಬಳಕೆ ಪ್ರಕರಣ ಈಗ ಕೋರ್ಟ್‌ನಲ್ಲಿದ್ದು, ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲ, ಎಂದು ಆಕ್ಷೇಪ ಎತ್ತಿದರು. ಸಚಿವ ಯು.ಟಿ.ಖಾದರ್‌ ಅವರು ”ಸಿಬಿಐ ತನಿಖೆಗೆ ಸಚಿವರು ಒಪ್ಪಿಲ್ಲ, ಸರಕಾರದ ಸಮ್ಮತಿ ಇಲ್ಲ” ಎಂದು ವಾದಿಸಿದರು.

ಈ ಬೆಳವಣಿಗೆಯಿಂದ ಗಲಿಬಿಲಿಗೊಂಡ ಜಮೀರ್‌ ಅಹ್ಮದ್‌ ಖಾನ್‌ ಅವರು, ಸಿಬಿಐ ತನಿಖೆ ನಡೆಸಬಹುದು ಎಂದು ನೀವು ಹೇಳಿದ್ದಕ್ಕೆ ನಾನು ನೋಡೋಣ ಎಂದಿದ್ದೇನೆ. ಸಿಬಿಐ ತನಿಖೆ ಮಾಡಿಸೋಣ ಎಂದು ಹೇಳಿಲ್ಲ ಎಂದು ಉಲ್ಟಾ ಹೊಡೆದರು. ಕಡತ ತರಿಸಿ ನೋಡಿ ರೂಲಿಂಗ್‌ ನೀಡುವುದಾಗಿ ಸಭಾಪತಿ ಹೊರಟ್ಟಿ ಚರ್ಚೆಗೆ ತೆರೆ ಎಳೆದರು. (ಎನ್.ಬಿ)

Leave a Reply

comments

Related Articles

error: