ಮೈಸೂರು

ಹಣ ನಿಷೇಧ ಬಳಿಕ ಬ್ಯಾಂಕ್ ವಹಿವಾಟು ಮೂರು ಪಟ್ಟು ಹೆಚ್ಚಿದೆ : ಡಾ.ಕಿಶೋರ್ ಸಾನ್ಸಿ

ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ಹಾಗೂ ಕಪ್ಪುಹಣವನ್ನು ನಿಯಂತ್ರಿಸುವ ಸಲುವಾಗಿ 500 ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು, ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ನಿಷೇಧದ ಬಳಿಕ ಬ್ಯಾಂಕಿನ ವಹಿವಾಟು ಮೂರುಪಟ್ಟು ಹೆಚ್ಚಾಗಿದೆ ಎಂದು ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಡಾ.ಕಿಶೋರ್ ಸಾನ್ಸಿ ಅಭಿಪ್ರಾಯಪಟ್ಟರು.

ಗುರುವಾರ ಮೈಸೂರಿನ ನಜರ್‍ಬಾದ್‍ನ ಶಾಲಿವಾಹನ ರಸ್ತೆ ನಂ.1ರಲ್ಲಿ ನೂತನವಾಗಿ ನಿಮಿಸಿರುವ ವಿಜಯ ಬ್ಯಾಂಕ್‍ನ ಪುನರ್ ಸಜ್ಜಿತ ಪ್ರಾದೇಶಿಕ ಕಚೇರಿಯನ್ನು ಡಾ.ಕಿಶೋರ್ ಸಾನ್ಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವ ಸಲುವಾಗಿ ನರೇಂದ್ರ ಮೋದಿಯವರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ನೋಟು ನಿಷೇಧದಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇದರಿಂದ ಜನಸಾಮಾನ್ಯರಿಗೆ ಇನ್ನೂ ಒಳ್ಳೆಯದೇ ಆಗುತ್ತದೆ. ಆರಂಭದ ದಿನಗಳಲ್ಲಿ ಕಷ್ಟವಾದರೂ ಬಳಿಕ ಇದರಿಂದ ಲಾಭವಾಗಲಿದೆ ಎಂದು ಹೇಳಿದರು.

ಕೆಲವರು ನಿಷೇಧ ಕ್ರಮವನ್ನು ಖಂಡಿಸುತ್ತಾರೆ. ಆದರೆ ಅವರಿಗೆ ಅದರ ಸರಿಯಾದ ಮಾಹಿತಿ ಇಲ್ಲ. ಮೊದಲು ಇದ್ದ ಸಮಸ್ಯೆ ಇಂದು ಇಲ್ಲ. ಜನಸಾಮಾನ್ಯರು ಸುಲಭವಾಗಿ ಹಣ ಡ್ರಾ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆಯಾಗುತ್ತಿಲ್ಲ. ಈ ತಿಂಗಳು  ಕಳೆಯುವುದರೊಳಗೆ ಸಮಸ್ಯೆ ನಿವಾರಣೆಯಾಗಲಿದ್ದು, ಹಣ ಸಮರ್ಪಕವಾಗಿ ಸಾರ್ವಜನಿಕರ ಕೈಗೆಟುಕುವಂತಾದ ನಂತರ ಯೋಜನೆಯ ಅನುಕೂಲವನ್ನು ಗಮನಿಸಬಹುದು ಎಂದರು.

ಅನಾಣ್ಯೀಕರಣ ಮಾಡಿರುವುದರ ಪರಿಣಾಮ ತಿಳಿಯಲು ನಗರದ ಬ್ಯಾಂಕ್ ವಹಿವಾಟಿನ ಬಗ್ಗೆ ಕ್ಷೇತ್ರ ವರದಿ ಮಾಡುತ್ತಿದ್ದೇನೆ. ಅಲ್ಲದೆ ಬ್ಯಾಂಕ್‍ಗಳ ಪರಿಸ್ಥಿತಿ ಅರಿಯಲು ವೀಡಿಯೋ ಕಾನ್ಫರೆನ್ಸ್ ಕೂಡ ಮಾಡುತ್ತಿದ್ದು ವರದಿಯನ್ನು ಶ್ರೀಘದಲ್ಲೇ ಬಿಡುಗಡೆ ಮಾಡಿ ಅದರ ಸತ್ಯಾಸತ್ಯತೆಗಳನ್ನು ತಿಳಿಸುತ್ತೇನೆ ಎಂದು ತಿಳಿಸಿದರು.

ನಗರದಲ್ಲಿ ಎರಡು ಸಿಎಸ್‍ಆರ್ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕೆ.ಆರ್.ಆಸ್ಪತ್ರೆಯ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮತ್ತು ಇಬ್ಬರು ಬಡ ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ. ಬಡತನದಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಗುರ್ತಿಸಿ ದತ್ತು ಪಡೆದುಕೊಳ್ಳುತ್ತೇವೆ. ದತ್ತು ತೆಗೆದುಕೊಂಡ  ಹೆಣ್ಣು ಮಗುವಿಗೆ ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ನೀಡುತ್ತೇವೆ. ಅಲ್ಲದೇ ಮಗುವಿನ ಎಲ್ಲಾ ಖರ್ಚುಗಳನ್ನು ಭರಿಸಲಿದ್ದು, ಈಗಾಗಲೇ 1112 ಹೆಣ್ಣು ಮಕ್ಕಳನ್ನು ತೆಗೆದುಕೊಂಡಿದ್ದೇವೆ ಎಂದ ಅವರು ಈ ವರ್ಷದಲ್ಲೇ 900 ಮಕ್ಕಳನ್ನು ದತ್ತು ತೆಗೆದುಕೊಂಡಿರುವುದಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಎಂ.ಆರ್.ಎಲ್.ನರಸಿಂಹರಾವ್ ಮತ್ತಿತರರು ಉಪಸ್ಥಿತರಿದ್ದರು

Leave a Reply

comments

Related Articles

error: