ಪ್ರಮುಖ ಸುದ್ದಿಮೈಸೂರು

ವೈದ್ಯರು ನೈತಿಕತೆಯಿಂದ ಕೆಲಸ ಮಾಡಬೇಕು : ಡಾ.ಕೆ.ಎಸ್.ಶೇಖರ್

ಉತ್ತಮ ವೈದ್ಯರಾದರೆ ಸಾಲದು.  ಮಾನವೀಯತೆಯನ್ನು ಬೆಳೆಸಿಕೊಂಡು ನೈತಿಕತೆಯಿಂದ ಕೆಲಸ ಮಾಡಬೇಕು ಎಂದು ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘದ ಮಾಜಿ ಅಧ್ಯಕ್ಷ ಡಾ.ಕೆ.ಎಸ್.ಶೇಖರ್ ತಿಳಿಸಿದರು.

ಮೈಸೂರಿನ ಕರ್ನಾಟಕ  ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಶಸ್ತ್ರ ಚಿಕಿತ್ಸಕರ ಆಸಿಕಾನ್ 2016 ಸಮ್ಮೇಳನದಲ್ಲಿ ಕೆ.ಎಸ್.ಶೇಖರ್ ಪಾಲ್ಗೊಂಡು ಮಾತನಾಡಿದರು. ಸಮಾಜಕ್ಕೆ ಸೇವೆ ಸಲ್ಲಿಸುವುದು ವೈದ್ಯರ ಕರ್ತವ್ಯ. ಕೆಲವು ವೈದ್ಯರು ಕಾರ್ಪೊರೇಟ್ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ದುರಂತ. ದುರಾಸೆ ದೂರವಿಟ್ಟು ನೈತಿಕತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಮಹದೇವಪ್ಪ ಅಖಿಲ ಭಾರತ ಶಸ್ತ್ರಚಿಕಿತ್ಸಕರ ಸಂಘದ 76ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನವನ್ನು  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಸ್ತ್ರಚಿಕಿತ್ಸಕರು ಮತ್ತು ಸಮಾಜದ ನಡುವಿನ ಅಂತರ ಕಡಿಮೆ ಮಾಡುವ ಕೆಲಸದಲ್ಲಿ ಆಸಿಕಾನ್ ನಿರತವಾಗಿದೆ ಎಂದರು. ವೈದ್ಯರು ರೋಗಿಗಳ ಜತೆ ಮಾನವೀಯತೆಯಿಂದ ವರ್ತಿಸಬೇಕು. ಅವರು ನೀಡುವ ಸೇವೆಗಳು ಸಾಮಾನ್ಯ ಜನರಿಗೆ ಎಟುಕುವಂತಿರಬೇಕು ಎಂದು ತಿಳಿಸಿದರು.

ಆಸಿಕಾನ್ ನೇರಪ್ರಸಾರದ ಮೂಲಕ ಶಸ್ತ್ರ ಚಿಕಿತ್ಸೆಗಳನ್ನು ತೋರಿಸುವ ಮೂಲಕ ಹೊಸಪ್ರಯೋಗ ಮಾಡಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಶಸ್ತ್ರ ಚಿಕಿತ್ಸಕ ವೈದ್ಯ ಆರ್.ಬಿ.ಪಾಟೀಲ ಅವರಿಗೆ ಜೀವಮಾನ ಸಾಧನೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಡಾ.ಶಿವ.ಕೆ.ಮಿಶ್ರಾ, ಖಜಾಂಚಿ ಡಾ.ಸಿ.ಆರ್.ಕೆ.ಪ್ರಸಾದ್, ಆಸಿಕಾನ್ ಸಂಘಟನಾ ಕಾರ್ಯದರ್ಶಿ ಡಾ.ಜಿ.ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: