ಮೈಸೂರು

ರೊಬೊ ನೆರವಿನಿಂದ ಶಸ್ತ್ರಚಿಕಿತ್ಸೆ: ನೇರ ಪ್ರಸಾರ, ಸಂವಾದ

ನವದೆಹಲಿ ಹಾಗೂ ಮುಂಬೈ ಆಸ್ಪತ್ರೆಗಳಲ್ಲಿ ರೋಬೊ ನೆರವಿನಿಂದ ನಡೆಸಲಾದ ಶಸ್ತ್ರಚಿಕಿತ್ಸೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿ ನೇರ ಪ್ರಸಾರ ಮಾಡಲಾಯಿತು.

ರಾಷ್ಟ್ರೀಯ ಶಸ್ತ್ರ ಚಿಕಿತ್ಸಕರ ‘ಅಸಿಕಾನ್-2016’ ಸಮ್ಮೇಳನದಲ್ಲಿ ಈ ಪ್ರಯತ್ನ ನಡೆಸಲಾಯಿತು. ದೆಹಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಡಾ.ಅರುಣ್ ಪ್ರಾಸ್ ಹಾಗೂ ಮುಂಬೈನ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯ ಡಾ.ಯುವರಾಜ್ ಅವರು ರೊಬೊಟಿಕ್ ತಂತ್ರಜ್ಞಾನದ ಮೂಲಕ ಇಬ್ಬರಿಗೆ ಬೊಜ್ಜು ಕರಗಿಸಲು ಶಸ್ತ್ರಚಿಕಿತ್ಸೆ ಹಾಗೂ ಒಬ್ಬರಿಗೆ ಕಿಡ್ನಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗೆ ರೊಬೊಟಿಕ್ ಸರ್ಜರಿ ಪರಿಣಾಮಕಾರಿ. ಅಮೆರಿಕಾದ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೂ ಇಲ್ಲಿ ಕುಳಿತು ಶಸ್ತ್ರಚಿಕಿತ್ಸೆ ನಡೆಸಬಹುದು. ನೇರವಾಗಿ ಶಸ್ತ್ರಚಿಕಿತ್ಸೆ ನಡೆಸುವಾಗ ವೈದ್ಯರು ಸ್ವಲ್ಪ ಭಯಪಡುವ ಸಾಧ್ಯತೆ ಇರುತ್ತದೆ. ಆದರೆ, ರೊಬೊಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಆ ಭಯ ಇಲ್ಲ. ತಜ್ಞ ಶಸ್ತ್ರಚಿಕಿತ್ಸಕರು ಕಂಪ್ಯೂಟರ್ ಮೂಲಕ ರೊಬೊ ನಿಯಂತ್ರಿಸುತ್ತಾರೆ. ಸಣ್ಣ ರಂಧ್ರ ಮಾಡಿದರೆ ಸಾಕು. ನೋವು, ರಕ್ತ ಸೋರಿಕೆ, ಗಾಯಕ್ಕೆ ಸೋಂಕು ತಗುಲುವ ಸಾಧ್ಯತೆ ಕಡಿಮೆ ಎಂದು ಡಾ. ರಘುವೀರ್ ಮಾಹಿತಿ ನೀಡಿದರು.

‘ರೊಬೊಟಿಕ್ ಶಸ್ತ್ರಚಿಕಿತ್ಸೆ ದುಬಾರಿ. ಮೂತ್ರಕೋಶ ಕಂಠದ ಕ್ಯಾನ್ಸರ್‍ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಸಾಮಾನ್ಯ ನರ್ಸಿಂಗ್ ಹೋಂನಲ್ಲಿ 80 ಸಾವಿರ ವೆಚ್ಚವಾದರೆ, ರೊಬೊಟಿಕ್ ಶಸ್ತ್ರ ಚಿಕಿತ್ಸೆಗೆ 4 ಲಕ್ಷದವರೆಗೆ ಖರ್ಚಾಗುತ್ತದೆ. ಹಾಗೆಯೇ, ಈ ಯಂತ್ರ ಖರೀದಿಗೆ 15 ಕೋಟಿ ವೆಚ್ಚವಾಗುತ್ತದೆ ಎಂದರು.

ವಿವಿಧ ದೇಶಗಳಿಂದ ಬಂದಿರುವ ಶಸ್ತ್ರಚಿಕಿತ್ಸಕರು ಹಾಗೂ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸೆಗಳ ನೇರಪ್ರಸಾರವನ್ನು ವೀಕ್ಷಿಸಿ, ತಜ್ಞರೊಂದಗೆ ಸಂವಾದ ನಡೆಸಿದರು. ಮೈಸೂರಿನ ಜೆಎಸ್‍ಎಸ್‍ ಆಸ್ಪತ್ರೆ, ಬೆಂಗಳೂರಿನ ಟುಲಿಪ್, ಕೊಯಮತ್ತೂರಿನ ಜಿಇಎಂ, ಹೈದರಾಬಾದ್ ಹಾಗೂ ಇತರ ನಗರಗಳ ಆಸ್ಪತ್ರೆಗಳಿಂದಲೂ ಶಸ್ತ್ರಚಿಕಿತ್ಸೆಗಳ ನೇರಪ್ರಸಾರ ಮಾಡಲಾಯಿತು. ಈ ಸಮ್ಮೇಳನವು ಡಿ.18ರವರೆಗೆ ನಡೆಯಲಿದ್ದು, ಸುಮಾರು 5,000 ಶಸ್ತ್ರಚಿಕಿತ್ಸಕರು ಪಾಲ್ಗೊಂಡಿದ್ದಾರೆ.

Leave a Reply

comments

Related Articles

error: