ಮೈಸೂರು

ಬಡವರಿಗೆ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಅಕ್ಕಿಗೆ ಭ್ರಷ್ಟ ಅಧಿಕಾರಿಗಳಿಂದಲೇ ಕನ್ನ

ಮೈಸೂರು, ಜು.14:- ರಾಜ್ಯದಲ್ಲಿ ಬಡವರು ಹಸಿವಿನಿಂದ ನರಳಬಾರದು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಉಚಿತವಾಗಿ ಬಡವರಿಗೆ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ  ನೀಡುತ್ತಿತ್ತು. ಆದರೇ ಭ್ರಷ್ಟ ಅಧಿಕಾರಿಗಳು ಬಡವರ ಅನ್ನವನ್ನೇ ನುಂಗಿ ನೀರು ಕುಡಿದಿರುವ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.

ನಂಜನಗೂಡಿನ ಎಪಿಎಂಸಿ ಆವರಣದಲ್ಲಿರುವ 5ನೇ ಆಹಾರ ಇಲಾಖೆಯ ಗೋದಾಮಿನಲ್ಲಿ ಒಂದು ಸಾವಿರ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ನಾಪತ್ತೆಯಾಗಿದೆ. ಖಚಿತ ಮಾಹಿತಿಯೊಂದಿಗೆ ಬೆಂಗಳೂರಿನಿಂದ ಆಗಮಿಸಿದ್ದ ಆಹಾರ ಇಲಾಖೆಯ ಅಧಿಕಾರಿಗಳು ಗೋದಾಮಿಗೆ ಇಂದು ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ 50 ಕೆಜಿ ತೂಕದ 2000 ಮೂಟೆಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ. ನಂಜನಗೂಡು ತಾಲೂಕಿಗೆ ಪ್ರತೀ ತಿಂಗಳು 22 ಸಾವಿರ ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಬಿಡುಗಡೆಯಾಗುತ್ತದೆ. ತಾಲೂಕಿನಲ್ಲಿ ಅಂತ್ಯೋದಯ, ಎಪಿಎಲ್ ಹಾಗೂ ಬಿಪಿಎಲ್ ಸೇರಿದಂತೆ 1,06,385 ಪಡಿತರ ಚೀಟಿದಾರರು ಇದ್ದಾರೆ.  ಆದರೆ ಅರ್ಹ ಫಲಾನುಭವಿಗಳಿಗೆ ಸೇರಬೇಕಾದ ಅಕ್ಕಿ ಎಲ್ಲಿಗೆ ಹೋಗಿದೆ ಎಂಬ ಮಾಹಿತಿಯೇ ಇಲ್ಲ.

ಬೆಂಗಳೂರಿನ ಗೋದಾಮಿನಿಂದ ನಂಜನಗೂಡು ಗೋದಾಮಿಗೆ 22 ಸಾವಿರ ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಬಂದಿರುವ ದಾಖಲೆ ಮಾತ್ರ ಇದೆ. ನಂಜನಗೂಡಿನ ಗೋದಾಮಿನಿಂದ 22 ಸಾವಿರ ಕ್ವಿಂಟಾಲ್ ಅಕ್ಕಿ ಎಲ್ಲೆಲ್ಲಿಗೆ ವಿತರಣೆಯಾಗಿದೆ ಎಂಬ ದಾಖಲೆಗಳು ಪರಿಶೀಲನೆ ವೇಳೆ ಸಿಕ್ಕಿಲ್ಲ. ಕೇವಲ 21 ಸಾವಿರ ಕ್ವಿಂಟಾಲ್ ಅಕ್ಕಿ ವಿತರಣೆಯಾಗಿರುವುದು ಕಂಡು ಬಂದಿದ್ದೇ ಆದರೂ, ಮಿಕ್ಕ 1 ಸಾವಿರ ಕ್ವಿಂಟಾಲ್ ಅಕ್ಕಿ ವಿತರಣೆ ಬಗ್ಗೆ ದಾಖಲೆಗಳೇ ಇಲ್ಲ. ಈ ಅಕ್ಕಿ ತಿಮಿಂಗಲ ರೂಪದಲ್ಲಿರುವ ಅಧಿಕಾರಿಗಳ ಹೊಟ್ಟೆಗೆ ಹೋಗಿದೆಯೇ? ಎಂಬ ಪ್ರಶ್ನೆ ಎದುರಾಗಿದೆ.

ಇಂದು ಮುಂಜಾನೆಯಿಂದಲೇ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಯಮಿತ ಗೋದಾಮಿನ ಅಧಿಕಾರಿಗಳಾದ ಮರುಳಸಿದ್ದ ಆರಾಧ್ಯ, ರಾಘವೇಂದ್ರ ಹಾಗೂ ಶಿವಶಂಕರಪ್ಪ ಪರಿಶೀಲನೆ ನಡೆಸಿದರಾದರೂ ನಾಪತ್ತೆಯಾಗಿರುವ ಅಕ್ಕಿಯ ಬಗ್ಗೆ ಮಾಹಿತಿ ದೊರೆಯದೆ ಗರಂ ಆಗಿದ್ದಾರೆ. ಅಧಿಕಾರಿಗಳ ಭೇಟಿ ವೇಳೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ  ಜಿಲ್ಲಾ ಉಪ ನಿರ್ದೇಶಕ ಕಾ.ರಾಮೇಶ್ವರಪ್ಪ ಸ್ಥಳದಲ್ಲೆ ಹಾಜರಿದ್ದರೂ, ನಾಪತ್ತೆಯಾದ ಅಕ್ಕಿ ಕುರಿತಂತೆ ಮಾಹಿತಿ ನೀಡುವಲ್ಲಿ ಗೋದಾಮಿನ ವ್ಯವಸ್ಥಾಪಕ ಮೈಲಾರಯ್ಯ ವಿಫಲರಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಅನ್ನಭಾಗ್ಯ ಅಕ್ಕಿಯ ಹಗರಣಗಳು ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಗೋದಾಮಿನಲ್ಲಿ 6 ಸಾವಿರ ಕ್ವಿಂಟಾಲ್ ಅಕ್ಕಿ , ಬನ್ನೂರಿನ ಗೋದಾಮಿನಲ್ಲಿ 6 ಸಾವಿರ ಕ್ವಿಂಟಾಲ್ ಅಕ್ಕಿ , ಕೆ.ಆರ್.ನಗರ ಗೋದಾಮಿನಲ್ಲಿ 650 ಕ್ವಿಂಟಾಲ್ ರಾಗಿ ನಾಪತ್ತೆಯಾಗಿವೆ. ಹೆಚ್.ಡಿ.ಕೋಟೆ ಗೋದಾಮಿನಲ್ಲಿ 450 ಕ್ವಿಂಟಾಲ್ ಅಕ್ಕಿ, ಮೈಸೂರು ನಗರದಲ್ಲಿ 4000 ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿದ್ದು, ಉಪ ನಿರ್ದೇಶಕ ಕಾ.ರಾಮೇಶ್ವರಪ್ಪ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆದರೆ ಇದೀಗ ಪ್ರಥಮ ಬಾರಿಗೆ ದಕ್ಷಿಣ ಕಾಶಿಗೂ ಲಗ್ಗೆ ಇಟ್ಟ ಭ್ರಷ್ಟ ಅಧಿಕಾರಿಗಳು ಬಡ ಫಲಾನುಭವಿಗಳಿಗೆ ದೊರಕಬೇಕಾದ ಅನ್ನಭಾಗ್ಯ ಅಕ್ಕಿಗೂ ಕನ್ನ ಹಾಕಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ತಾಂಡವಾಡುತ್ತಿರುವುದು ಕಂಡು ಬರುತ್ತಿದ್ದು, ಬಡವರ ಹೊಟ್ಟೆಯ ಹಸಿವನ್ನು ನೀಗಿಸಬೇಕಾದ ಅಕ್ಕಿ ಭ್ರಷ್ಟ ಅಧಿಕಾರಿಗಳ ದುರಾಸೆಯ ಪಾಲಾಗುತ್ತಿರುವುದು ವಿಪರ್ಯಾಸ. ಪ್ರಾಥಮಿಕ ತನಿಖೆಯಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಹಗರಣ ಪತ್ತೆಯಾದರೇ ಇನ್ನು ಆಳವಾಗಿ ತನಿಖೆ ನಡೆಸಿದರೆ ಇನ್ನೆಷ್ಟು ಹಗರಣಗಳು ಹೊರ ಬರಲಿದೆಯೇನೋ ಎನ್ನುತ್ತಾರೆ ಸಾರ್ವಜನಿಕರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: