ಮೈಸೂರು

ಟ್ಯಾಂಕ್ ಮೇಲ್ಭಾಗಕ್ಕೆ ಮುಚ್ಚಳವಿಲ್ಲ : ಕಲ್ಮಶಗೊಳ್ಳುತ್ತಿದೆ ನೀರು, ಸರಿಪಡಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ಮೈಸೂರು,ಜು.16:- ತಿ.ನರಸೀಪುರ ಪಟ್ಟಣದ ಪುರಸಭೆ ವ್ಯಾಪ್ತಿಯ 23 ನೇ ವಾರ್ಡ್‍ಗೆ ಕಳೆದ 15 ದಿನಗಳಿಂದಲೂ ಶುದ್ಧ ಕುಡಿಯುವ ನೀರು ಸರಬರಾಜಾಗದ ಪರಿಣಾಮ ನಿವಾಸಿಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ 23 ನೇ ವಾರ್ಡ್‍ಗೆ ತಾಲೂಕು ಪಂಚಾಯತ್ ಹಿಂಭಾಗದಲ್ಲಿರುವ ಹಳೆಯ ನೀರಿನ ಟ್ಯಾಂಕ್‍ನಿಂದ ನೀರು ಸರಬರಾಜಾಗುತ್ತಿದ್ದು, ಟ್ಯಾಂಕ್‍ನ ಮೇಲ್ಭಾಗದಲ್ಲಿ ಮುಚ್ಚದ ಕಾರಣ ಕುಡಿಯುವ ನೀರಿಗೆ ಅಕ್ಕಪಕ್ಕದಲ್ಲಿ ಬೆಳೆದು ನಿಂತಿರುವ ನೀಲಗಿರಿ ಮರದ ಕಸಕಡ್ಡಿಗಳು, ಹಾಗೂ ಮರದಲ್ಲಿ ಗೂಡು ಕಟ್ಟಿರುವ ಪಾರಿವಾಳದ ಹಕ್ಕಿಯ ರೆಕ್ಕೆ ಪುಕ್ಕಗಳು ಬಿದ್ದು ನೀರು ಕಲ್ಮಶಗೊಳ್ಳುತ್ತಿದೆ. ಅದೇ ನೀರು ವಾರ್ಡ್‍ಗೆ ಸರಬರಾಜಾಗುತ್ತಿರುವ ಪರಿಣಾಮ ನಿವಾಸಿಗಳು ಶುದ್ಧ ಕುಡಿಯುವ ನೀರು ಸಿಗದೇ ಪರದಾಡುವಂತಾಗಿದೆ.

ಕಳೆದ 20 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿರುವ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಸ್ವಚ್ಛತೆ ಇಲ್ಲದ ಕಾರಣ ಯಾವ ಹಂತದಲ್ಲಾದರೂ ಕುಸಿದು ಬೀಳುವ ಸಾಧ್ಯತೆಗಳು ಹೆಚ್ಚಿದೆ. ಈ ನಡುವೆ ಟ್ಯಾಂಕ್‍ನ ಸುತ್ತಲೂ ಆಳೆತ್ತರ ಗಿಡಗಂಟಿಗಳು ಬೆಳೆದು ನಿಂತಿದ್ದು, ಟ್ಯಾಂಕ್ ಮೇಲ್ಭಾಗಕ್ಕೆ ಹತ್ತಲು ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕಳೆದ 15 ದಿನಗಳಿಂದ ವಾರ್ಡ್‍ನಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಖುದ್ದು ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ವಾರ್ಡ್ ನಿವಾಸಿಗಳಾದ ರಾಮಸ್ವಾಮಿ, ಅಕ್ಕಿ ನಂಜುಂಡಸ್ವಾಮಿ ದೂರಿದ್ದಾರೆ.

ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಸ್ಥಳೀಯರು ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸ್ಕೂಟರ್ ಮೂಲಕ ನೀರು ತಂದು ದಿನದೂಡುತ್ತಿದ್ದು, ಸಮಸ್ಯೆ ಬಿಗಡಾಯಿಸುವ ಮೊದಲು ಪುರಸಭೆ ಅಧಿಕಾರಿಗಳು ನೀರಿನ ಟ್ಯಾಂಕ್ ಸ್ವಚ್ಛತೆ ಹಾಗೂ ಮೇಲ್ಭಾಗ ಮುಚ್ಚುವ ಕಾರ್ಯಕ್ಕೆ ಮುಂದಾಗದಿದ್ದಲ್ಲಿ ಪುರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ವಾರ್ಡ್ ನಿವಾಸಿಗಳು ಎಚ್ಚರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: