ದೇಶಪ್ರಮುಖ ಸುದ್ದಿ

ಅಣ್ಣಾ ಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಆಯ್ಕೆ: ಜಯಾ ಸಾವಿನ ಕುರಿತು ಮತ್ತಷ್ಟು ಅನುಮಾನ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧಾನಾನಂತರ ಪಕ್ಷದ ಮೇಲೆ ತಮ್ಮ ಹಿಡಿತ ಸ್ಥಾಪಿಸಿರುವ ಶಶಿಕಲಾ ನಟರಾಜನ್ ಅವರೇ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಪಕ್ಷದ ಸಂಸದರು ಮತ್ತು ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಪ್ರಧಾನ ಕಾರ್ಯದರ್ಶಿ ಹುದ್ದೆ ಪಕ್ಷದ ಮುಖ್ಯಸ್ಥರ ಸ್ಥಾನವಾಗಿದೆ ಎಂದು ಇಲ್ಲಿ ಗಮನಾರ್ಹ.

1972ರಲ್ಲಿ ಡಿಎಂಕೆ ಪಕ್ಷದಿಂದ ಹೊರಬಂದು ಎಂಜಿ ಆರ್ ಹೊಸ ಪಕ್ಷ ಎಐಎಡಿಎಂಕೆ ಸ್ಥಾಪಿಸಿದ್ದರು. ನಂತರ 15 ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದರು. 1987ರಲ್ಲಿ ಅವರ ನಿಧನದ ನಂತರ ಪಕ್ಷದ ನೇತೃತ್ವ ವಹಿಸಿಕೊಂಡ ಜಯಲಲಿತಾ ಅವರು ನಿಧನರಾಗುವವರೆಗೂ ಸತತ 27 ವರ್ಷಗಳ ಕಾಲ ಪ್ರಶ್ನಾತೀತ ನಾಯಕಿಯಾಗಿ ಪಕ್ಷಕ್ಕೆ ಆಸರೆಯಾಗಿದ್ದರು.

ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ಇದೀಗ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು, ಶಶಿಕಲಾ ಆಯ್ಕೆ ಮೇಲ್ನೋಟಕ್ಕೆ ಪಕ್ಷದ ಸರ್ವಾನುಮತದ ಆಯ್ಕೆ ಎಂದು ಬಿಂಬಿಸಲ್ಪಟ್ಟಿದ್ದರೂ ಪಕ್ಷದ ಕೆಲವು ಕಾರ್ಯಕರ್ತರು ಭಿನ್ನ ನಿಲುವು ತಳೆದಿದ್ದಾರೆ.

ಜಯಲಲಿತಾ ಅವರ ಅನಾರೋಗ್ಯಕ್ಕಿಡಾಗಿದ್ದಾಗ ಅವರಿಗೆ ತಪ್ಪು ಔಷಧ ಕೊಟ್ಟಿರುವುದು ಅಪೊಲೊ ಆಸ್ಪತ್ರೆಯ ವೈದ್ಯರೊಂದಿಗೆ ನಡೆಸಿದ ಇ-ಮೇಲ್ ಮೂಲಕ ಬಹಿರಂಗಗೊಂಡಿದ್ದು, ತಪ್ಪು ಔಷಧ ನೀಡಲು ಕಾರಣರು ಯಾರು ಎಂಬ ಪ್ರಶ್ನೆಗಳೆದ್ದಿವೆ. ಜಯಾ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‍ನಲ್ಲೂ ಅರ್ಜಿ ಸಲ್ಲಿಕೆಯಾಗಿದೆ. ನಟಿ ಗೌತಮಿ ಅವರೂ ಕೂಡ ಪ್ರಧಾನಿಗೆ ಪತ್ರ ಬರೆದು ಜಯಾ ಸಾವಿನ ರಹಸ್ಯ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.

ಜಯಲಲಿತಾ ಅಣ್ಣ ಜಯಕುಮಾರ್ ಅವರ ಪುತ್ರಿ ದೀಪಾ ಜಯಕುಮಾರ್ ಅವರು ಶಶಿಕಲಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮಿಳುನಾಡಿನ ಕೆಲವು ಕಡೆ ದೀಪಾ ಪರವಾಗಿ ಪಕ್ಷದ ಕೆಲವು ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ.

ಜಯಲಲಿತಾ ಕೂಡ ತಮ್ಮ ವಿರುದ್ಧ ಸಂಚು ರೂಪಿಸಿದ ಆರೋಪದ ಮೇಲೆ ಶಶಿಕಲಾ ಅವರನ್ನು ತಮ್ಮ ಮನೆಯಿಂದ ಆಚೆ ಕಳಿಸಿದ್ದು ಮಾತ್ರವಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ವಜಾ ಮಾಡಿದ್ದರು. ಆದರೆ ಅವರ ನಿಧನದ ನಂತರ ಪಕ್ಷದ ನಾಯಕತ್ವ ವಹಿಸಿಕೊಂಡಿರುವ ಶಶಿಕಲಾ ಅವರ ನಡೆ ಪಕ್ಷದ ಕೆಲವು ನಾಯಕರಿಗೆ ಅಸಮಾಧಾನ ಮತ್ತು ಅನುಮಾನ ಉಂಟುಮಾಡಿದೆ.

ಈ ಕಾರಣದಿಂದ ಜಯಾ ಸೋದರ ಸೊಸೆ ದೀಪಾ ಜಯಕುಮಾರ್ ಅವರನ್ನು ಪಕ್ಷದ ನಾಯಕತ್ವ ವಹಿಸಿಕೊಳ್ಳುವಂತೆ ಮನವೊಲಿಸುವಲ್ಲಿ ಅತೃಪ್ತ ಮುಖಂಡರು ನಿರತರಾಗಿದ್ದಾರೆ. ಇದಕ್ಕೆ ದೀಪಾ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಅಣ್ಣಾ ಡಿಎಂಕೆ ಪಕ್ಷದ ನಾಯಕತ್ವ ವಹಿಸಿಕೊಂಡಿರುವ ಶಶಿಕಲಾ, ಶೀಘ್ರದಲ್ಲೇ ಮುಖ್ಯಮಂತ್ರಿ ಹುದ್ದೆಗೂ ಏರಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.

ಈ ಎಲ್ಲ ಬೆಳವಣಿಗೆಗಳಿಂದ ತಮಿಳುನಾಡಿನ ರಾಜಕೀಯ ವಲಯದಲ್ಲಿ ತಂತ್ರ ಪ್ರತಿತಂತ್ರಗಳು ಏರ್ಪಡುತ್ತಿವೆ. ಪಕ್ಷದ ಹುದ್ದೆಗೆ ಲಗ್ಗೆ ಹಾಕಿರುವ ಶಶಿಕಲಾ ಅದನ್ನು ಉಳಿಸಿಕೊಳ್ಳುತ್ತಾರಾ? ಅಥವಾ ಅವರ ವಿರುದ್ಧ ಭಿನ್ನಮತ ಭುಗಿಲೇಳುತ್ತದೆಯಾ ಎನ್ನುವುದು ಸದ್ಯದ ಪ್ರಶ್ನೆ.

ಜಯಲಲಿತಾ ಅವರ ಸಂಪರ್ಕಕ್ಕೆ ಬಂದಾಗಿನಿಂದಲೂ ಶಶಿಕಲಾ ತಮ್ಮ ಮೂಲ ಪ್ರದೇಶದ ಮನ್ನಾರ್ ಕುಡಿ ಮಾಫಿಯಾ ಗ್ಯಾಂಗ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದ್ದು, ಪಕ್ಷದ ಹಿಡಿವನ್ನು ಅಷ್ಟು ಸುಲಭಕ್ಕೆ ಬೇರೆಯವರಿಗೆ ಬಿಟ್ಟುಕೊಡುವವರಲ್ಲ.

ಮುಂದಿನ ದಿನಗಳಲ್ಲಿ ಅಣ್ಣಾಡಿಎಂಕೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟುಗಳು ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಬಹುದು. ಪ್ರತಿಪಕ್ಷ ಡಿಎಂಕೆಯ ಪ್ರಶ್ನಾತೀತ ನಾಯಕ ಕರುಣಾನಿಧಿಯವರು ಕೂಡ ವಯಸ್ಸಿನ ಕಾರಣದಿಂದ ತಮ್ಮ ಪುತ್ರ ಸ್ಟಾಲಿನ್ ಅವರನ್ನು ಪಕ್ಷದ ಮುಂದಿನ ಪೀಳಿಗೆಯ ನಾಯಕರಾಗಿ ಈ ಹಿಂದೆಯೇ ಹೆಸರಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ತಮಿಳುನಾಡು ಹೊಸ ತಲೆಮಾರಿನ ನಾಯಕರ ನೇತೃತ್ವವನ್ನು ಸಾಕ್ಷೀಕರಿಸಬಹುದು ಎಂಬುದು ಎಲ್ಲರ ನಿರೀಕ್ಷೆ.

Leave a Reply

comments

Related Articles

error: