ಮೈಸೂರು

ಜಿಎಸ್ ಟಿಯಿಂದ ಮುಕ್ತ ಮಾರುಕಟ್ಟೆಯ ವಾತಾವರಣ ನಿರ್ಮಾಣವಾಗಲಿದೆ : ಡಿ.ರಂದೀಪ್

ಕೇಂದ್ರ ಸರ್ಕಾರ ಜಿಎಸ್‍ಟಿ ಅಳವಡಿಸುತ್ತಿರುವುದರಿಂದ ಮುಕ್ತ ಮಾರುಕಟ್ಟೆಯ ವಾತಾವರಣ ನಿರ್ಮಾಣವಾಗಲಿದೆ. ದೇಶದೆಲ್ಲೆಡೆ ಒಂದೇ ಮಾದರಿಯ ತೆರಿಗೆ ವ್ಯವಸ್ಥೆ ಜಾರಿಯಾಗುವುದರಿಂದ ಗ್ರಾಹಕರಿಗಲ್ಲದೆ ಮಾರಾಟಗಾರರಿಗೂ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಭಾರತ ಸರ್ಕಾರದ ಜವಳಿ ಸಚಿವಾಲಯ ಹಾಗೂ ಜವಳಿ ಆಯುಕ್ತರ ಪ್ರಾದೇಶಿಕ ಕಾರ್ಯಾಲಯದ ವತಿಯಿಂದ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ 3 ದಿನಗಳ ಕಾಲ ಆಯೋಜಿಸಿರುವ ಖರೀದಿದಾರರು ಹಾಗೂ ಮಾರಾಟಗಾರರ ಸಮಾವೇಶವನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜಾಗತೀಕರಣದ ಪರಿಣಾಮದಿಂದಾಗಿ ಇಂದು ಹೆಚ್ಚೆಚ್ಚು ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿದ್ದರೂ ಅವುಗಳ ಸರಿಯಾದ ಮಾಹಿತಿ ಸಾರ್ವಜನಿಕರಿಗೆ ಇರುವುದಿಲ್ಲ. ಇಂತಹ ಅಂತರ್‍ರಾಜ್ಯ ಖರೀದಿದಾರರ ಹಾಗೂ ಮಾರಾಟಗಾರರ ಸಮಾವೇಶಗಳನ್ನು ಆಯೋಜಿಸುವುದರಿಂದ ಅಲ್ಲಿನ ಉದ್ಯಮ, ಉತ್ಪಾದನೆ, ವಸ್ತುಗಳ ಗುಣಮಟ್ಟ ಸೇರಿದಂತೆ ಎಲ್ಲವೂ ಗ್ರಾಹಕರಿಗೆ ಲಭ್ಯವಾಗುತ್ತದೆ. ಇದರಿಂದ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಸುಲಭವಾಗುವುದಲ್ಲದೆ ಉತ್ತಮ ಮಾರುಕಟ್ಟೆ ದೊರೆಯುವುದರಿಂದ ಸಣ್ಣ ಉದ್ದಿಮೆದಾರರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಒಂದೇ ರೀತಿಯ ತೆರಿಗೆಯಿಂದ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿ ಯುವಕರಿಗೆ ಉದ್ಯೋಗ ದೊರೆಯುವುದಲ್ಲದೆ ಆರ್ಥಿಕತೆಯೂ ಸದೃಢವಾಗುತ್ತದೆ. ಇಲ್ಲಿ ಆಯೋಜಿಸಿರುವ ಜವಳಿ ಸಮಾವೇಶದಿಂದ ಕೊಳ್ಳುವವರಿಗೆ ಉತ್ತಮ ಅವಕಾಶ ಲಭ್ಯವಾಗಿದ್ದು ಇದರ ಸದುಪಯೋಗಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಸಮಾವೇಶದಲ್ಲಿ ಈರೋಡ್, ದಿಂಡಿಗಲ್, ಸತ್ಯಮಂಗಲಂ, ಚೆನ್ನೈ, ಕೋಮಾರಪಾಳ್ಯಂ, ಪಲ್ಲಾದಮ್, ಕರೂರ್, ಶಿಘ್ಲಿ ಸೇರಿದಂತೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ 15ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಸೀರೆ, ಚೂಡಿದಾರ್ ಡ್ರೆಸ್ ಮೆಟೀರಿಯಲ್, ನೆಲಹಾಸುಗಳು, ಚಿಕ್ಕಮಕ್ಕಳ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದ್ದು ಡಿ.18ರವರೆಗೂ ಲಭ್ಯವಿದೆ.

ಕಾರ್ಯಕ್ರಮದಲ್ಲಿ ಮೈಸೂರು ಜವಳಿ ಮತ್ತು ಸಿದ್ಧ ಉಡುಪು ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್.ಎನ್.ರಮೇಶ್, ಉಪಾಧ್ಯಕ್ಷ ಎ.ವಿಜಯ್‍ರಾಜ್, ಕಾರ್ಯದರ್ಶಿ ಬಿ.ವಿ.ಮಾಧವರಾವ್, ಶಶಿಕುಮಾರ್.ಕೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: