ದೇಶಪ್ರಮುಖ ಸುದ್ದಿ

ಮಹಿಳಾ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರಧಾನಿಗೆ ರಾಹುಲ್ ಗಾಂಧಿ ಪತ್ರ

ನವದೆಹಲಿ (ಜುಲೈ 16): ಜುಲೈ 18ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಎರಡು ಪುಟಗಳ ಪತ್ರ ಬರೆದಿದ್ದಾರೆ.

ಈ ಪತ್ರದ ಜೊತೆ ಮಹಿಳಾ ಕಾಂಗ್ರೆಸ್ ವತಿಯಿಂದ ಸಂಗ್ರಹ ಮಾಡಿರುವ 32 ಲಕ್ಷ ಸಹಿ ಸಂಗ್ರಹದ ಮಾಹಿತಿಯನ್ನೂ ಅವರು ಪ್ರಧಾನಿಯವರಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯಸಭೆಯಲ್ಲಿ ಮಾರ್ಚ್ 9, 2010ರಲ್ಲೇ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಲಾಗಿತ್ತು. ಆದರೆ ಅದು ಲೋಕಸಭೆಯಲ್ಲಿ ಇನ್ನೂ ಮಂಡನೆಯಾಗಿಲ್ಲ. 2014ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೂ ಈ ವಿಧೇಯಕವನ್ನು ಅಂಗೀಕರಿಸುವುದಾಗಿ ಹೇಳಿತ್ತು ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಂಚಾಯತ್ ಮಟ್ಟದಲ್ಲಿ ಕೂಡ ಪುರುಷರಿಗಿಂತ ಮಹಿಳೆಯರೇ ನಾಯಕತ್ವದ ಗುಣಗಳನ್ನು ತೋರಿಸುತ್ತಿದ್ದಾರೆ ಎಂದು ಸಿನಿಕರಾಗಿರುವ ನಿಮ್ಮ ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಡಿ. ಸಮಾಜದ ಒಳಿತಿಗಾಗಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಮಹಿಳೆಯರೇ ಮುಂದು. ಭಾರತವನ್ನು ಬದಲಾಯಿಸುವ ಸಾಮರ್ಥ್ಯ ಮಹಿಳೆಯರಿಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ನೀವು ಹಲವಾರು ಸಾರ್ವಜನಿಕ ಸಭೆಗಳಲ್ಲಿ ಕೂಡ ಮಹಿಳಾ ಸಬಲೀಕರಣದ ಬಗ್ಗೆ ಮತ್ತು ಆಡಳಿತದಲ್ಲಿ ಅವರನ್ನು ಒಳಗೊಳ್ಳಿಸುವಿಕೆ ಬಗ್ಗೆ ಕೂಡ ಮಾತನಾಡಿದ್ದೀರಿ. ಮಹಿಳೆಯರ ಅಭ್ಯುದಯಕ್ಕಾಗಿ ನೀವು ಬದ್ಧರಾಗಿದ್ದೀರೆಂದು ತೋರಿಸಲು ಇದಕ್ಕಿಂತ ಉತ್ತಮ ಅವಕಾಶ ಮತ್ತಾವುದಿದೆ? ಇನ್ನೂ ತಡಮಾಡಿದರೆ ಲೋಕಸಭೆ ಚುನಾವಣೆಯೊಳಗೆ ಈ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಲು ಸಾಧ್ಯವೇ ಆಗುವುದಿಲ್ಲ ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಜುಲೈ 18ರಿಂದ ಆರಂಭವಾಗಲಿರುವ ಆಗಸ್ಟ್ 10ರಂದು ಅಂತ್ಯಗೊಳ್ಳಲಿದ್ದು, ಒಟ್ಟು 18 ದಿನ ನಡೆಯಲಿದೆ. ಪ್ರಸ್ತುತ ಎನ್ ಡಿಎ ಸರ್ಕಾರದ ಈ ಅವಧಿಯ ಕೊನೆಯ ಮುಂಗಾರು ಅಧಿವೇಶನ ಇದಾಗಿದ್ದು, ಹಲವು ಮಹತ್ವದ ವಿಧೇಯಕಗಳು ಮಂಡನೆಯಾಗುವ ಸಾಧ್ಯತೆ ಇದೆ. (ಎನ್.ಬಿ)

Leave a Reply

comments

Related Articles

error: