ಕರ್ನಾಟಕಪ್ರಮುಖ ಸುದ್ದಿ

ಬಿಬಿಎಂಪಿಗೆ ಪ್ರತ್ಯೇಕ ಕಾನೂನು ತರಲು ಚಿಂತನೆ: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು (ಜುಲೈ 17): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರಸ್ತುತ ಇರುವ ಮುನಿಸಿಪಾಲಿಟಿ ಕಾನೂನನ್ನು ಪರಿಷ್ಕರಿಸಿ ಪ್ರತ್ಯೇಕ ಕಾನೂನು ತರಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಹಾಗೂ ಬೆಂಗಳೂರು ಮಹಾನಗರ ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ಅವರು ಬುಧವಾರ ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಕುರಿತ ಎರಡನೇ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಆದರೂ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಮಾರಾಟ ಅವ್ಯಾಹತವಾಗಿಯೇ ನಡೆಯುತ್ತಿದೆ. ಇಂತಹ ಪ್ರಕರಣಗಳನ್ನು ಪತ್ತೆಮಾಡಿ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ಅವರು ಹೇಳಿದರು.

ಬೆಂಗಳೂರು ನಗರದಲ್ಲಿ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಫ್ಲೆಕ್ಸ್’ಗಳನ್ನು ಹಾಕಲಾಗುತ್ತಿದೆ. ಅನಧಿಕೃತವಾದ ಫ್ಲೆಕ್ಸ್’ಗಳನ್ನು ಹಾಕುವವರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ನಗರದಲ್ಲಿ ಮನಬಂದಂತೆ ಕೇಬಲ್‍ಗಳನ್ನು ಅಳವಡಿಸಲಾಗಿದೆ. ಅನಧಿಕೃತ ಕೇಬಲ್‍ಗಳ ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಪ್ರಕಟಿಸಿದರು.

ಕಸ ಸಂಗ್ರಹಣೆ ಹಾಗೂ ವಿಲೇವಾರಿ ಕುರಿತಂತೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕಸದಲ್ಲಿ ವಿದ್ಯುತ್ ತಯಾರಿಸುವ ಕುರಿತಂತೆ ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಬೆಂಗಳೂರಿನ ಎಲ್ಲ ಭಾಗಗಳಲ್ಲೂ ಎಲ್‍ಇಡಿ ಬಲ್ಬ್’ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.

ನಿರ್ಭಯ ಯೋಜನೆಯಡಿ ರಾಜ್ಯಕ್ಕೆ 650 ಕೋಟಿ ರೂ. ಹಣ ಬಂದಿದೆ.  ಈ ಹಣದಲ್ಲಿ ಬೆಂಗಳೂರಿನ ಎಲ್ಲಾ ಕಡೆ ಸುಮಾರು 5000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಮುಂದಿನ ವಾರದಿಂದ ನಗರದ ಎಲ್ಲಾ 28 ಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ. ಜನರನ್ನು ಸಂಪರ್ಕಿಸುತ್ತೇನೆ. ಸ್ಥಳೀಯ ಸಮಸ್ಯೆಗಳನ್ನು ಆಲಿಸುತ್ತೇನೆ, ಅಲ್ಲದೆ, ಪ್ರತಿದಿನ ಮೂರು-ನಾಲ್ಕು ವಿಧಾನ ಸಭಾಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ ಎಂದರು.

ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚಿದೆ ರಸ್ತೆ ಗುಂಡಿಗಳಿಗೆ ಪರಿಹಾರ ಕಂಡು ಹಿಡಿಯಲು ವೈಟ್’ಟಾಪಿಂಗ್ ಕಾಮಗಾರಿ ಪ್ರಾರಂಭಿಸಲಾಗಿದೆ. ಒಮ್ಮೆ ಸಿಮೆಂಟ್ ರಸ್ತೆ ಆದಲ್ಲಿ ರಸ್ತೆ ಗುಂಡಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದ ಅವರು ನಗರದಲ್ಲಿ ಹೆಚ್ಚುತ್ತಿರುವ ಡ್ರಗ್ ಮಾಫಿಯಾ ಹತ್ತಿಕ್ಕುವ ಸಂಬಂಧ ಇಂದು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪೌರ ಕಾರ್ಮಿಕರಿಗೆ ಸಂಬಳ ನೀಡಲು ತಕ್ಷಣ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಕಾರ್ಪೋರೇಷನ್ ಮಾಡಬೇಕು ಎಂದು ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ. ಎಸ್. ಪಾಟೀಲ್ ನೇತೃತ್ವದ ಸಮಿತಿ ಈ ಹಿಂದೆ ನೀಡಿರುವ ವರದಿಯಲ್ಲಿ ತಿಳಿಸಿದೆ. ಈ ವರದಿ ಪರಿಶೀಲನಾ ಹಂತದಲ್ಲಿದೆ.

ಬೃಹತ್ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಬಾರಿ 10 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಈಗಾಗಲೇ 150 ಶಾಲೆಗಳು ನಡೆಯುತ್ತಿವೆ. ಅದರ ಜೊತೆಗೆ 75 ಸರ್ಕಾರಿ ಶಾಲೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ಸಂಸತ್ ಸದಸ್ಯರು, ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಬೃಹತ್ ಬೆಂಗಳೂರು ಮಹಾ ಪೌರರು, ಉಪ ಮಹಾಪೌರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: