ದೇಶ

ಮಕ್ಕಳ ಕಳ್ಳನೆಂದು ಭಾವಿಸಿ ಟೆಕ್ಕಿ ಕೊಂದ ಪ್ರಕರಣ : ಟೆಕ್ಕಿ ತಾಯಿಯ ಆಕ್ರೋಶ

ಹೈದರಾಬಾದ್,ಜು.17- ಕಳೆದ ಶುಕ್ರವಾರ ಬೀದರ್ ಜಿಲ್ಲೆಯ ಮುರ್ಕಿ ಗ್ರಾಮದಲ್ಲಿ ಮಕ್ಕಳ ಕಳ್ಳ ಎಂದು ಭಾವಿಸಿ ಹೈದರಾಬಾದ್ ಮೂಲದ ಟೆಕ್ಕಿಯನ್ನು ಸ್ಥಳೀಯರು ಹೊಡೆದು ಕೊಂದಿರುವ ಬಗ್ಗೆ ಆತನ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೆಕ್ಕಿ ಮಹಮದ್ ಆಜಮ್ ತಾಯಿ, ನನ್ನ ಮಗ ಸಾಫ್ಟ್ ವೇರ್ ಇಂಜಿನಿಯರ್. ಆತ ಎಂದೂ ಒಂದು ಸಣ್ಣ ಪ್ರಾಣಿಗೂ ಹಾನಿ ಮಾಡಿದನಲ್ಲ. ಹೀಗಿರುವಾಗ ಮಕ್ಕಳನ್ನು ಅಪಹರಿಸಲು ಹೇಗೆ ಸಾಧ್ಯ. ಮಕ್ಕಳ ಕಳ್ಳ ಎಂದು ಭಾವಿಸಿ ಆತನನ್ನು ಹೊಡೆದು ಕೊಂದು ಹಾಕಿದ್ದಾರೆ. ಇದು ನಿಜಕ್ಕೂ ಅಕ್ಷ್ಯಮ್ಯ ಅಪರಾಧ. ನನ್ನ ಮಗ ಪಾಕಿಸ್ತಾನಕ್ಕೆ ಹೋಗಿರಲಿಲ್ಲ. ಕರ್ನಾಟಕಕ್ಕೆ ಹೋಗಿದ್ದ. ಆದರೂ ಆತನ ಮೇಲೆ ಹಲ್ಲೆ ನಡೆಸಿ ಕೊಂದರು ಎಂದು ಕಣ್ಣೀರು ಹಾಕಿದ್ದಾರೆ.

ಮಹಮದ್ ಆಜಮ್ ಸಹೋದರಿ, ನನ್ನ ಸಹೋದರ 2 ವರ್ಷದ ಮಗುವಿನ ತಂದೆ. ತನ್ನ ಮೇಲೆ ದಾಳಿ ಮಾಡಲು ಬಂದ ಸ್ಥಳೀಯರಿಗೆ ಐಡಿ ಕಾರ್ಡ್ ತೋರಿಸಿದ್ದಾನೆ. ಹೀಗಿದ್ದೂ ಆತನನ್ನು ನಂಬದೇ ಆತನ ಮೇಲೆ ದಾಳಿ ಮಾಡಿದ್ದಾರೆ. ಆತನ ಮೇಲೆ ನಂಬಿಕೆ ಇಲ್ಲ ಎಂದ ಮೇಲೆ ಪೊಲೀಸರಿಗೆ ಒಪ್ಪಿಸಬಹುದಿತ್ತು. ಹೊಡೆದು ಕೊಲ್ಲುವಂತಹ ಅಪರಾಧ ನನ್ನ ಸಹೋದರ ಏನು ಮಾಡಿದ್ದ ಎಂದು ಆಕೆ ಪ್ರಶ್ನಿಸಿದ್ದಾರೆ.

ಕಳೆದ ಶುಕ್ರವಾರ ಬೀದರ್ ಜಿಲ್ಲೆಯ ಮುರ್ಕಿ ಗ್ರಾಮದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಟೆಕ್ಕಿ ಮಹಮದ್ ಆಜಮ್ ಮತ್ತು ಆತನ ಇತರೆ ನಾಲ್ಕು ಸ್ನೇಹಿತರನ್ನು ಸ್ಥಳೀಯ ಸುಮಾರು 2500ಕ್ಕೂ ಹೆಚ್ಚು ಜನ ಮಕ್ಕಳ ಕಳ್ಳರು ಎಂದು ಭಾವಿಸಿ ಹಲ್ಲೆ ಮಾಡಿದ್ದರು. ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಟೆಕ್ಕಿ ಮಹಮದ್ ಆಜಮ್ ಸಾವನ್ನಪ್ಪಿದ್ದ. ಇನ್ನು ಘಟನೆಯಲ್ಲಿ ಮಧ್ಯ ಪ್ರವೇಶ ಮಾಡಿದ್ದ ಪೊಲೀಸರ ಮೇಲೂ ಸ್ಥಳೀಯರು ಹಲ್ಲೆ ಮಾಡಿದ್ದರು. ಈ ವೇಳೆ ನಾಲ್ಕು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: