ಮೈಸೂರು

ಬಡ್ತಿ ಮೀಸಲಾತಿ : ತತ್ಪರಿಣಾಮ ಜೇಷ್ಠತೆ ವಿಸ್ತರಿಸುವ ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಜು.20ರಂದು ಸಿಎಂ ಗೆ ಕಪ್ಪು ಭಾವುಟ ಪ್ರದರ್ಶನ

ಮೈಸೂರು, ಜು 17 :  ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಲ್ಲಿನ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ 2017 ಅನ್ನು ಅನುಷ್ಠಾನಗೊಳಿಸಲು ವಿಳಂಭ ನೀತಿ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಮಹಾಪೌರ ಪುರುಷೋತ್ತಮ್ ಎಚ್ಚರಿಸಿದರು.

ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಡ್ತಿ ಹಾಗೂ ಜೇಷ್ಠತೆ ಸಂರಕ್ಷಿಸುವ ಉದ್ದೇಶದಿಂದ ರೂಪಿಸಲಾದ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು ಸಹ ಅದನ್ನು ಅನುಷ್ಠಾನಗೊಳಿಸಲು ಸರ್ಕಾರ ಮೀನಾಮೇಷ ಏಣಿಸುತ್ತಿದ್ದು ಸಂವಿಧಾನದ ಉಲ್ಲಂಘಟನೆಯಾಗಿದೆ ಎಂದು ತಿಳಿಸಿದರು.

ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ರಾಷ್ಟ್ರಪತಿಗಳು ಅಂಕಿತ ಹಾಕಿದ ಅನುಮೋದನೆಯನ್ನು ಅನುಷ್ಠಾನಗೊಳಿಸದೆ ಸರ್ಕಾರ ಹಕ್ಕು ಚ್ಯುತಿಯಾಗಿದ್ದು, ಶೀಘ್ರದಲ್ಲಿಯೇ ಆಜ್ಞೆಯನ್ನು ಜಾರಿಗೊಳಿಸಿ ಇಲ್ಲವೇ ಖುರ್ಚಿ ಖಾಲಿ ಮಾಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನ್ಯಾಯಾಲಯದಲ್ಲಿ ನಿಂದನಾ ಅರ್ಜಿ ಬಾಕಿ ಇದೆ ನೆಪವೊಡ್ಡಿ ಕಾಯ್ದೆ ಅನುಷ್ಠಾನಗೊಳಿಸದೇ ಸರ್ಕಾರ ವೃಥಾ ಕಾಲಾಹರಣ ಮಾಡುತ್ತಿದೆ, ಅಲ್ಲದೇ ಕೇವಲ ಒಂದು ಜನಾಂಗಕ್ಕೆ ಮಾತ್ರ ಸರ್ಕಾರ ಸೀಮಿತವಾಗಿದ್ದರೇ ಆ ಬಗ್ಗೆ ವಿಧಾನಸೌಧದಲ್ಲಿ ನಾಮ ಫಲಕ ಅಳವಡಿಸಲಿ ಎಂದು ವ್ಯಂಗ್ಯವಾಡಿದರು.

ಶೇ.18ರಷ್ಟು ಮೀಸಲಾತಿಯನ್ನು ಪರಿಶಿಷ್ಠರಿಗೆ ನೀಡಬೇಕೆಂಬುದೇ ತಮ್ಮ ಹೋರಾಟವೇ ವಿನಃ ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಜು.20ರಂದು ಕೆ.ಆರ್.ಎಸ್ ಗೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಸಿಎಂ ಕುಮಾರಸ್ವಾಮಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಜು.19ರಂದು ನಡೆಸಲಿರುವ ಪ್ರತಿಭಟನೆಯನ್ನು  ಟೌನ್ ಹಾಲ್ ನ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಿದ್ದು, ಪ್ರತಿಭಟನೆಯಲ್ಲಿ ಮಂಡ್ಯ, ಮೈಸೂರು,ಹಾಸನ, ಚಿಕ್ಕಮಗಳೂರು, ಕೊಡುಗು, ಮಡಿಕೇರಿಯ ಹಲವಾರು ಸಂಘಟನೆಗಳು ಭಾಗಿಯಾಗಲಿವೆ ಎಂದು ಹೇಳಿದರು.

ಚಿತ್ರದುರ್ಗದ ಚಲುವಾದಿ ಮಠದ ಬಸವದೇವ ಸ್ವಾಮೀಜಿ, ಊರಿಲಿಂಗಿಪೆದ್ದಿಮಠದ ಮುಡುಕುತೊರೆ ಶಾಖೆಯ ಸಿದ್ದರಾಜು ಶಿವಯೋಗಿ ಸ್ವಾಮೀಜಿ, ಅಹಿಂದ ಮುಖಂಡ ಸೋಮಯ್ಯ ಮಲಿಯೂರು, ಎಪಿಎಂಸಿ ಸದಸ್ಯ ಜವರಪ್ಪ ಗೋಷ್ಠಿಯಲ್ಲಿ ಭಾಗಿಯಾಗಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: