ಮೈಸೂರು

ಪತ್ರಿಕಾ ವಿತರಕರ ಸಂಘದ 2017ರ ಕ್ಯಾಲೆಂಡರ್ ಬಿಡುಗಡೆ

ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ವತಿಯಿಂದ 2017 ನೇ ವರ್ಷದ ನೂತನ ಕ್ಯಾಲೆಂಡರ್ ನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.

ಮೈಸೂರಿನ ಪತ್ರಕರ್ತ ಭವನದಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು  ಪತ್ರಿಕೆ ವಿತರಕರು, ಲಾರಿ ಮತ್ತು ಆಟೋ ಡ್ರೈವರ್ ಗಳು ಸೇರಿದಂತೆ ದೇಶದಲ್ಲಿ ಒಟ್ಟು 47.8 ಕೋಟಿ ಅಸಂಘಟಿತರಿದ್ದಾರೆ. ಇವರಿಗೆ ಯಾವುದೇ ರೀತಿಯ ಸುರಕ್ಷಾ ಯೋಜನೆಗಳಿಲ್ಲ. ಇವರೆಲ್ಲರನ್ನು ಒಟ್ಟುಗೂಡಿಸಿ ಸಂಘಟಿತ ವಲಯಕ್ಕೆ ಸೇರಿಸಬೇಕು. ಇವರೂ ಸಹ ದೇಶ ಸೇವೆ ಮಾಡುತ್ತಿದ್ದಾರೆ. ಇನ್ನು 5-6 ತಿಂಗಳೊಳಗೆ ಸಂಘಟಿತ ವಲಯಕ್ಕೆ ಸೇರಿಸುವ ನಿರ್ಣಯವನ್ನು ಲೋಕಸಭೆಯಲ್ಲಿ  ತೆಗೆದುಗೊಳ‍್ಳಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಮಾತನಾಡಿ, ಒಂದು ಸಂಘಟನೆ ಸ್ಥಾಪಿಸುವುದು ಇಂದು ಸುಲಭದ ಕೆಲಸ. ಆದರೆ ಅದನ್ನು ನೈಪುಣ್ಯತೆಯಿಂದ ಮುಂದುವರೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸವಾಗಿದೆ. ಮೈಸೂರು ಪತ್ರಕರ್ತರ ಸಂಘವು ಕಳೆದ 11 ವರ್ಷಗಳಿಂದ ಅಸಂಘಟಿತ ವಲಯವನ್ನು ಸಂಘಟಿತ ವಲಯವನ್ನಾಗಿ ರೂಪಿಸಿದೆ. 2000 ಕ್ಕೂ ಹೆಚ್ಚು ಪತ್ರಕರ್ತರನ್ನು ಒಟ್ಟಾಗಿ ಸೇರಿಸಿದೆ. ಸಂಘಟನೆಗಳು ಹೆಚ್ಚಾದಂತೆ ಸಂಘರ್ಷಗಳು ಹೆಚ್ಚಾಗುತ್ತವೆ. ಆದ್ದರಿಂದ ಸಂಘಟನೆಗಳ ನಡುವೆ ಸಮನ್ವಯತೆ- ಸೌಹಾರ್ದತೆ ಇರಬೇಕು ಎಂದು ಹೇಳಿದರು.

ಒಂದು ಪತ್ರಿಕೆ ಒಬ್ಬ ಪತ್ರಕರ್ತನನ್ನು ರೂಪಿಸಬಹುದು. ಪತ್ರಕರ್ತರು ಬದ್ಧತೆಯಿಂದ ಕೆಲಸ ಮಾಡಿ ಪತ್ರಿಕೆಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕಳೆದ ವರ್ಷ ಪತ್ರಿಕಾ ವಿತರಕರ ಸುರಕ್ಷಾ ನಿಧಿಯಿಂದ 1 ಲಕ್ಷ ದೇಣಿಗೆ ನೀಡಲಾಗಿದೆ ಎಂದರು.

ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಸಂಘದ ಅಧ‍್ಯಕ್ಷ ಬಿ.ಸುರೇಶ್, ಪ್ರಧಾನ ಕಾರ್ಯದರ್ಶಿ ಸುಂದರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: