ಮೈಸೂರು

ವಿದ್ಯಾರ್ಥಿಗಳು ಜ್ಞಾನಶಕ್ತಿ ಬಳಸಿ ಭವಿಷ್ಯ ರೂಪಿಸಿಕೊಳ್ಳಿ : ಹೆಚ್.ಆರ್.ಬಸಪ್ಪ ಸಲಹೆ

ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ತಮ್ಮಲ್ಲಿರುವ ಜ್ಞಾನಶಕ್ತಿಯನ್ನು ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಆರ್.ಬಸಪ್ಪ ಸಲಹೆ ನೀಡಿದರು.

ಶುಕ್ರವಾರ ಗ್ರಾಮೀಣ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಯ ವತಿಯಿಂದ ಮೈಸೂರಿನ ರಾಜೇಂದ್ರ ನಗರದ ಕೆಸರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯವನ್ನು ಹೆಚ್.ಆರ್.ಬಸಪ್ಪ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಗ್ರಂಥಾಲಯಗಳು ಕೇವಲ ಪುಸ್ತಕಗಳನ್ನು ಮಾತ್ರ ಹೊಂದಿರುವುದಿಲ್ಲ. ಕಲಿಕೆಗೆ ಪೂರಕವಾಗಿರುವ ಎಲ್ಲಾ ವಾತಾವರಣಗಳನ್ನು ಹೊಂದಿರುತ್ತವೆ. ಇಂದಿನ ಅತ್ಯಾಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಪುಸ್ತಕಾಭ್ಯಾಸ ಮಾಡುತ್ತಿಲ್ಲ. ಹೆಚ್ಚೆಚ್ಚು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೀತಿ ಬೆಳೆಸುವ ಸಲುವಾಗಿ ಸುಸಜ್ಜಿತವಾದ ಕೊಠಡಿಯುಳ್ಳ ವಿಜ್ಞಾನ, ಪರಿಸರ, ಆಂಗ್ಲಭಾಷೆ, ಕಥೆ, ಕವನ ಸೇರಿದಂತೆ ಎಲ್ಲಾ ವಿಧವಾದ ಪುಸ್ತಕಗಳುಳ್ಳ ಗ್ರಂಥಾಲಯವನ್ನು ಉದ್ಘಾಟಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಕುಶಲತೆ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ತರಗತಿ ಮುಗಿದ ಬಳಿಕ ಕಾಲಹರಣ ಮಾಡದೆ ಗ್ರಂಥಾಲಯಕ್ಕೆ ತೆರಳಿ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು. ತಮಗೆ ಲಭ್ಯವಿರುವ ವಾತಾವರಣವನ್ನು ಗುಣಮಟ್ಟದ ಶಿಕ್ಷಣದ ಪರಿಸರವಾಗಿ ಪರಿವರ್ತಿಸಿಕೊಂಡು ಯಶಸ್ಸಿನೆಡೆಗೆ ಮುನ್ನುಗ್ಗಬೇಕು ಆಗ ಮಾತ್ರ ವಿದ್ಯಾರ್ಥಿಗಳ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ, ಉತ್ತರವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸುಶೀಲಮ್ಮ, ಮುಖ್ಯೋಪಾಧ್ಯಾಯ ಮಹದೇವಯ್ಯ, ಕರ್ನಾಟಕ ರಾಜ್ಯ ಎಸ್‍ಡಿಎಂಸಿಗಳ ಒಕ್ಕೂಟದ ಕಾರ್ಯದರ್ಶಿ, ನಳಿನಾ, ಶರ್ಮಿಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: