ಲೈಫ್ & ಸ್ಟೈಲ್

ಮಧುಮೇಹವಿದ್ದು ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿದರೆ ಪರಿಹಾರವೇನು?

ಮಧುಮೇಹಿಗಳು ಆಗಾಗ್ಗೆ ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಪದೇ ಪದೇ ವೈದ್ಯರ ಬಳಿಗೆ ಹೋಗುವುದು ತಪ್ಪಿಸಲು ಮನೆಯಲ್ಲಿಯೇ ಗ್ಲುಕೋಮೀಟರ್‌ನಿಂದ ಪರೀಕ್ಷಿಸಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ರಕ್ತದಲ್ಲಿ ಗುಕೋಸ್ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದರೆ ಏನು ಮಾಡಬೇಕು? ಇಲ್ಲಿದೆ ಪರಿಹಾರ.

ರಕ್ತದಲ್ಲಿ ಸಕ್ಕರೆಯ ಮಟ್ಟವು ಕಡಿಮೆಯಾದರೆ ಅಂದರೆ 70 ಎಂಜಿ/ಡಿಎಲ್‌ಗಿಂತ ಕೆಳಕ್ಕಿಳಿದಿದ್ದರೆ ಅಂತಹ ಸ್ಥಿತಿಯನ್ನು ಹೈಪೊಗ್ಲೈಸಿಮಿಯಾ ಎಂದು ಕರೆಯಲಾಗುತ್ತದೆ. ಔಷಧಿಗಳು ಅಥವಾ ಇನ್ಸುಲಿನ್ ತೆಗೆದುಕೊಳ್ಳುತ್ತಿರುವ ಮಧುಮೇಹ ರೋಗಿಗಳು ಕೆಲವೊಮ್ಮೆ ಊಟವನ್ನು ತಪ್ಪಿಸಬಹುದು,ಕಡಿಮೆ ಊಟವನ್ನು ಮಾಡಿರಬಹುದು ಅಥವಾ ದಿನಕ್ಕಿಂತ ಹೆಚ್ಚಿನ ವ್ಯಾಯಾಮವನ್ನು ಮಾಡಬಹುದು.

ಇವು ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರ್ ಇಳಿಯಲು ಅಥವಾ ಹೈಪೊಗ್ಲೈಸಿಮಿಯಾಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಸಕ್ಕರೆಯ ಮಟ್ಟವನ್ನು ಸಹಜ ಸ್ಥಿತಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಶರೀರದಲ್ಲಿ ನಡುಕ, ಮಾನಸಿಕ ಗೊಂದಲ, ಅತಿಯಾಗಿ ಬೆವರುವಿಕೆ, ಉದ್ವೇಗ ಅಥವಾ ಆತಂಕ, ಮನಃಸ್ಥಿತಿಯಲ್ಲಿ ಬದಲಾವಣೆಗಳು, ತಲೆ ಸುತ್ತುವಿಕೆ, ನಿಶ್ಶಕ್ತಿ, ತಲೆನೋವು, ಕೈಕಾಲುಗಳಲ್ಲಿ ಜುಮುಗುಟ್ಟಿದ ಅಥವಾ ಮರಗಟ್ಟಿದ ಅನುಭವ ಇವೆಲ್ಲವೂ ಹೈಪೊಗ್ಲೈಸಿಮಿಯಾದ ಲಕ್ಷಣಗಳಾಗಿವೆ.

ಹೈಪೊಗ್ಲೈಸಿಮಿಯಾದ ಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಮಧಮೇಹಿಗಳು ಕಾಯಬಾರದು. ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ 70 ಎಂಜಿ/ಡಿಎಲ್‌ಗಿಂತ ಕಡಿಮೆಯಾಗಿರುವುದು ಕಂಡುಬಂದರೆ 15-20 ಗ್ರಾಂ ಗ್ಲುಕೋಸ್ ಅಥವಾ ಸಾದಾ ಕಾರ್ಬೊಹೈಡ್ರೇಟ್‌ಗಳನ್ನು ಸೇವಿಸಿ. 15 ನಿಮಿಷಗಳ ಕಾಲ ವಿಶ್ರಾಂತಿ ಪಡೆದು ಪುನಃ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿ ಊಟಕ್ಕೆ ಮುನ್ನ ಅದು ಸಹಜ ಸ್ಥಿತಿಗೆ ಮರಳಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಮರಳಿರದಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಒಂದು ಚಮಚ ಸಕ್ಕರೆಯನ್ನು ಅಥವಾ 3-4 ಗ್ಲುಕೋಸ್ ಮಾತ್ರೆಗಳನ್ನು ಸೇವಿಸಿ. ಬದಲಾಗಿ 5-6 ಸಕ್ಕರೆಯ ಕ್ಯಾಂಡಿಗಳನ್ನು ಚೀಪಬಹುದು ಇಲ್ಲವೇ ಅರ್ಧ ಗ್ಲಾಸ ಸಕ್ಕರೆ ಬೆರೆತ ಪಾನೀಯ ಅಥವಾ ರಸಗಳನ್ನು ಸೇವಿಸಬಹುದು. ಒಂದು ಚಮಚ ಸಕ್ಕರೆಯನ್ನು ಒಂದು ಗ್ಲಾಸ್ ನೀರಿಗೆ ಬೆರೆಸಿ ಕುಡಿದರೂ ಅದು ಕೆಲಸ ಮಾಡುತ್ತದೆ. ಹೈಪೊಗ್ಲೈಮಿಯಾ ಉಂಟಾದಾಗ ಹೆಚ್ಚಿನವರು ಚಾಕಲೇಟ್, ಮಾಲ್ಟೆಡ್ ಪಾನೀಯಗಳು, ಬಿಸ್ಕಿಟ್‌ಗಳು, ಒಣದ್ರಾಕ್ಷಿ, ಮಿಲ್ಕಶೇಕ್ ಇತ್ಯಾದಿಗಳನ್ನು ಬಳಸುತ್ತಾರೆ. ಆದರೆ ಇವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಹಜ ಸ್ಥಿತಿಗೆ ಮರಳಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತವೆ. (ಎನ್.ಬಿ)

Leave a Reply

comments

Related Articles

error: