ಪ್ರಮುಖ ಸುದ್ದಿಮೈಸೂರು

ವರ್ಷಪೂರ್ತಿ ವಸ್ತುಪ್ರದರ್ಶನ ಚಟುವಟಿಕೆಗಳನ್ನು ನಡೆಸಲು ಚಿಂತನೆ : ಸಚಿವ ಸಾ.ರಾ. ಮಹೇಶ್

ಮೈಸೂರು, ಜು.18 :- ವರ್ಷ ಪೂರ್ತಿ ಚಟುವಟಿಕೆ ನಡೆಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿ, ಪ್ರವಾಸಿಗರನ್ನು ಆಕರ್ಷಿಸುವಂತೆ ವಸ್ತುಪ್ರದರ್ಶನಕ್ಕೆ  ಯೋಜನೆ ರೂಪಿಸಬೇಕು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಅವರು ತಿಳಿಸಿದರು.
ಅವರು ಬುಧುವಾರ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆಸಿದ 142ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ  ಸಮಗ್ರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಇ ಅಂಡ್ ವೈ ಸಂಸ್ಥೆ ಅವರು ಸಿದ್ದಪಡಿಸಿದ ಮಾಸ್ಟರ್ ಪ್ಲಾನ್ ವೀಕ್ಷಿಸಿದ ನಂತರ ಮಾತನಾಡಿ ಯೋಜನೆಯಲ್ಲಿ ಮಾರಾಟ ಮಳಿಗೆಗಳು, ಸಾಂಸ್ಕೃತಿಕ ಹಾಗೂ ಅಮ್ಯೂಸ್ ಮೆಂಟ್ ಪಾರ್ಕ್ ಮೂರು ಭಾಗಗಳಾಗಿ ರೂಪಿಸಲಾಗಿದೆ. ಯೋಜನೆ ಅನುಷ್ಠಾನವಾದ ನಂತರ ನಿರ್ವಹಣೆ ಅತ್ಯಂತ ಮುಖ್ಯವಾಗಿರುತ್ತದೆ ಎಂದರು.
ಮೈಸೂರಿಗೆ ಪ್ರವಾಸಿಗರು ಆಗಮಿಸಿದಾಗ ಅರಮನೆ ವೀಕ್ಷಣೆಯ ನಂತರ ಮೃಗಾಲಯಕ್ಕೆ ಭೇಟಿ ನೀಡಲೇಬೇಕು ಎಂದು ಇಚ್ಛಿಸುತ್ತಾರೆ. ಅದೇ ರೀತಿ ವಸ್ತುಪ್ರದರ್ಶನವನ್ನು ಸಹ ವೀಕ್ಷಿಸಬೇಕು ಎಂಬ ರೀತಿ ಆಕರ್ಷಕವಾಗಿ ಹಾಗೂ ವ್ಯವಸ್ಥಿತವಾಗಿ ಯೋಜನೆ ರೂಪುಗೊಳ್ಳಬೇಕು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ರೂಪಿಸಿರುವ ಯೋಜನೆಯಲ್ಲಿ ಯಾವುದಾರರೂ ಬದಲಾವಣೆಗಳಿದ್ದಲ್ಲಿ ಚರ್ಚಿಸಿ ತಿಳಿಸಲಾಗುವುದು ಎಂದರು. ಪ್ರವಾಸಿಗರಿಗೆ ಪಾರ್ಕಿಂಗ್ ವ್ಯವಸ್ಥೆ ಉತ್ತಮ ರೀತಿಯಲ್ಲಿ ಆಗಬೇಕಿದೆ. ವಸ್ತುಪ್ರದರ್ಶನ ಆವರಣದಲ್ಲಿ ಮೂರು ಮಹಡಿಯ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಿ,  ಅರಮನೆ, ಮೃಗಾಲಯ ಹಾಗೂ ವಸ್ತುಪ್ರದರ್ಶನ ವೀಕ್ಷಿಸಲು ಆಗಮಿಸುವವರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು.
ದಸರಾ ವಸ್ತುಪ್ರದರ್ಶನ -2018 ಕ್ಕೆ ಸಂಬಂಧಿಸಿದಂತೆ ಯೋಜಿಸಲಾಗಿರುವ ಸಿವಿಲ್ ಮತ್ತು ವಿದ್ಯುತ್ ವಿಭಾಗದ ನಿರ್ವಹಣಾ ಕಾಮಗಾರಿಗಳ ಬಗ್ಗೆ  ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕುಮಾರ್ ಅವರು ಸಭೆಗೆ ವಿವರಿಸಿದರು.
ಸಚಿವರು ವಿದ್ಯುತ್ ನಿರ್ವಹಣಾ ಕಾಮಗಾರಿಗೆ ಸಂಬಂಧಿಸಿದಂತೆ ವಸ್ತುಪ್ರದರ್ಶನ ನಡೆಯುವ ಸಂದರ್ಭದಲ್ಲಿ ವಿದ್ಯುತ್ ದೀಪವನ್ನು ನಿರಂತರವಾಗಿ ಒದಗಿಸಲು ಜನರೇಟರ್ ಬಾಡಿಗೆಗೆ ಪಡೆಯಲು ಟೆಂಡರ್ ಕರೆಯಲಾಗುತ್ತಿದೆ. 2018 ನೇ ಸಾಲಿನಲ್ಲಿ ಇದೇ ಪ್ರಕ್ರಿಯೆಯನ್ನು ಮುಂದುವರಿಸಿ, 2019 ನೇ ಸಾಲಿನಲ್ಲಿ ಇದರ ಪರ್ಯಾಯವಾಗಿ ಹಾಗೂ ಶಾಶ್ವತವಾಗಿ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಜನರೇಟರ್ ಖರೀದಿಸಲು ಚಿಂತಿಸಬೇಕು ಎಂದರು.
ಮೈಸೂರು ದಸರಾವನ್ನು ವಿಶೇಷವಾಗಿ ಈ ಬಾರಿ ಆಚರಿಸಲಾಗುತ್ತಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಉದ್ಯೋಗ ಮೇಳವನ್ನು ಅಕ್ಟೋಬರ್ ಮಾಹೆಯಲ್ಲಿ ಆಯೋಜಿಸಲಾಗುವುದು ಎಂದರು.
ಈ ಬಾರಿ ಅಕ್ಟೋಬರ್ 18 ರಂದು ಆಯುಧಪೂಜೆ ಹಾಗೂ 19 ರಂದು ವಿಜಯದಶಮಿಗೆ ಸರ್ಕಾರಿ ರಜೆ ಇರುತ್ತದೆ. ಅಕ್ಟೋಬರ್ 20 ಶನಿವಾರವಾಗಿದ್ದು, 21 ಭಾನುವಾರವಾಗಿರುತ್ತದೆ. ಶನಿವಾರವು ಸಹ ರಜೆ ದೊರೆತರೆ ಒಟ್ಟಿಗೆ 4 ದಿನ ರಜೆಯೊಂದಿಗೆ ಪ್ರವಾಸಿಗರೂ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು. ಈ ದೃಷ್ಠಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಅಕ್ಟೋಬರ್ 12 ರಂದು ಇರುವ ಎರಡನೇ ಶನಿವಾರದ ರಜೆ ದಿನವನ್ನು ಕೆಲಸ ದಿನ ಮಾಡಿ ಅಕ್ಟೋಬರ್ 20 ರಂದು ರಜೆ ನೀಡುವಂತೆ  ಪತ್ರ ಬರೆಯಲಾಗುವುದು ಎಂದರು.
ಗೋಲ್ಡನ್ ಚಾರಿಯೇಟ್ ವಿನ್ಯಾಸ 10 ವರ್ಷದಿಂದ ಒಂದೇ ರೀತಿಯಲ್ಲಿದೆ. ಇದರ ವಿನ್ಯಾಸವನ್ನು ನವೀಕರಣಗೊಳಿಸಬೇಕಿದ್ದು, ಸಭೆಯ ನಂತರ ಅಶೋಕಪುರಂನಲ್ಲಿ ಗೋಲ್ಡನ್ ಚಾರಿಯೇಟ್ ನವೀಕರಣದ ಬಗ್ಗೆ ಕೆ.ಎಸ್.ಟಿ.ಡಿ.ಸಿ. ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮು, ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಜಂಗಲ್ ಲಾಡ್ಜ್  ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 ಸಭೆಯ ನಂತರ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಲಾಖೆಯ 2017-18 ನೇ ಸಾಲಿನ ಸಾಧನೆಯ ವಿವರ ಪಡೆದರು. 2017-18 ನೇ ಸಾಲಿನಲ್ಲಿ ಇಲಾಖೆಯು ಶೇ 72 ರಷ್ಟು ಸಾಧನೆ ಮಾಡಿದೆ. 2018-19 ನೇ ಸಾಲಿನಲ್ಲಿ ನೀಡುವ ಅನುದಾನವನ್ನು ಪಾರದರ್ಶಕವಾಗಿ ಬಳಸಿ ಶೇ 100 ರಷ್ಟು ಸಾಧನೆ ಮಾಡಬೇಕು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: