ಮೈಸೂರು

ಪಾಲಿಕೆ ಅಧಿಕಾರಿಗಳೆಂದು ನಂಬಿಸಿ ಮನೆ ಅಳತೆಗೆ ಬಂದು ಚಿನ್ನಾಭರಣ ದೋಚಿದ್ದ ಖದೀಮರು ತುಮಕೂರಲ್ಲಿ ಸೆರೆ

ಮೈಸೂರು,ಜು.19:- ಮಹಾನಗರ ಪಾಲಿಕೆಯ ಅಧಿಕಾರಿಗಳು, ನಿಮ್ಮ ಮನೆ ಅಳತೆ ಮಾಡಬೇಕು, ಬಳಿಕ ನಿಮಗೆ ನೀರಿನ ಬಿಲ್ ಪಾವತಿಸುವ ಅಗತ್ಯವಿಲ್ಲವೆಂದು ಹೇಳಿ ಮನೆಯೊಡತಿಯನ್ನು ಯಾಮಾರಿಸಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾದ ಘಟನೆ ಮೈಸೂರು ಕುವೆಂಪುನಗರದ ಎನ್.ಬ್ಲಾಕ್ ನಲ್ಲಿ ಹಾಡಹಗಲೇ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ತಿಲಕ್ ಪಾರ್ಕ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತುಮಕೂರು ಪೊಲೀಸರು ಬಂಧಿಸಿದ್ದ ಈ ಆರೋಪಿಗಳು ವಿಚಾರಣೆಯ ವೇಳೆ ಮೈಸೂರಿನಲ್ಲಿ ಚಿನ್ನಾಭರಣ ದೋಚಿದ ಕುರಿತು ಬಾಯ್ಬಿಟ್ಟಿದ್ದು, ಅವರು ಹೇಳಿದ್ದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಕೆ.ಜಿ.ಲೀಲಾವತಿ ಅವರ ಮನೆಗೆ ಹೋಗಿ ಖದೀಮರ ಪೋಟೋ ತೋರಿಸಿ ಇವರೇನಾ ನಿಮ್ಮ ಮನೆಯನ್ನು ದೋಚಿದ್ದು, ಎಂದು ಕೇಳಿದಾಗ ಅವರು ಫೋಟೋದಲ್ಲಿರುವವರನ್ನು ಗುರುತಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂವರನ್ನು ಇಂದು ಮೈಸೂರಿಗೆ ಕರೆತರಲಾಗುತ್ತಿದ್ದು, ಇನ್ನಷ್ಟು ವಿಚಾರಣೆ ನಡೆಯಲಿದೆ. ಕದ್ದ ಚಿನ್ನಾಭರಣವನ್ನು ಎಲ್ಲಿಟ್ಟಿದ್ದಾರೆಂಬುದು ತಿಳಿದು ಬಂದಿದ್ದು, ಅದನ್ನು ವಶಪಡಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭಿಸಿದೆ.

ಪ್ರಕರಣದ ವಿವರ

ಕಳೆದ ಜೂ.22ರಂದು ನಾವು ಮಹಾನಗರ ಪಾಲಿಕೆಯ ಸಿಬ್ಬಂದಿಗಳು. ನಿಮ್ಮ ಮನೆ ಅಳತೆ ಮಾಡಬೇಕು. ಮನೆ ಅಳತೆ ಮಾಡಿದರೆ ಮುಂದಿನ ತಿಂಗಳಿನಿಂದ ನೀರಿನ ಬಿಲ್ ಉಚಿತ ಎಂದು ಹೇಳಿಕೊಂಡು ಬಂದ ವ್ಯಕ್ತಿಗಳ್ಮೂವರು ಮನೆಯಲ್ಲಿದ್ದ ಹತ್ತು ಲಕ್ಷರೂ.ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕುವೆಂಪುನಗರದಲ್ಲಿ ನಡೆದಿತ್ತು.

ಕುವೆಂಪುನಗರದ ಕೆಎಸ್ ಆರ್ ಟಿಸಿ ಬಸ್ ಡಿಪೋ ರಸ್ತೆಯ ನಿವಾಸಿ ಲೀಲಾವತಿ ಎಂಬವರ ಮನೆಗೆ ಬಂದ ಅನಾಮಿಕರು ಮನೆಯನ್ನು ಅಳತೆ ಮಾಡುವುದಾಗಿ ಹೇಳಿದ್ದರು. ಮೂವರೂ ಮನೆಯ ಕೋಣೆಗಳನ್ನು ಅಳತೆ ಮಾಡುತ್ತಿದ್ದು, ಅವರಲ್ಲಿ ಓರ್ವ ಮನೆಯ ಮೇಲ್ಭಾಗ ತೋರಿಸುವಂತೆ ಹೇಳಿದ್ದ. ಮತ್ತಿಬ್ಬರು ಕೆಳಗಡೆ ಅಳತೆ ಮಾಡುವಂತೆ ನಟಿಸುತ್ತಿದ್ದರು. ಮನೆಯನ್ನು ಅಳತೆ ಮಾಡಿದ್ದೇವೆ. ಮುಂದಿನ ತಿಂಗಳಿನಿಂದ ನೀರಿನ ಬಿಲ್ ಉಚಿತ ಎಂದು ಹೇಳಿ ಹೋಗಿದ್ದರು. ಬಳಿಕ ಲೀಲಾವತಿ ಅವರಿಗೆ ಅನುಮಾನ ಬಂದಿದ್ದು, ಮನೆಯ ಬೀರುವಿನ ಬಾಗಿಲು ತೆರೆದು ನೋಡಿದಾಗ ಮನೆಯ ರೂಂನಲ್ಲಿದ್ದ 280 ಗ್ರಾಂ ತೂಕದ ಚಿನ್ನಾಭರಣಗಳು ಕಳುವಾಗಿರುವುದು ಕಂಡು ಬಂದಿದ್ದು, ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: