ಕರ್ನಾಟಕ

ಶೀರೂರು ಶ್ರೀಗಳ ವಕೀಲರಿಂದ ಸ್ಫೋಟಕ ಮಾಹಿತಿ

ಉಡುಪಿ (ಜುಲೈ 19): ಇಂದು ಬೆಳಿಗ್ಗೆಯಷ್ಟೆ ಮಣಿಪಾಲ ಆಸ್ಪತ್ರೆಯಲ್ಲಿ ಶೀರೂರು ಮಠದ ಶ್ರೀಗಳು ನಿಧನರಾಗಿದ್ದು, ಶ್ರೀಗಳ ಪರ ವಕೀಲ ರವಿಕಿರಣ್ ಮುರುಡೇಶ್ವರ ಅವರು ಶ್ರೀಗಳ ಸಾವಿನ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.

ಶೀರೂರು ಶ್ರೀಗಳು, ಪಟ್ಟದ ದೇವರ ಹಸ್ತಾಂತರದ ಬಗ್ಗೆ ನ್ಯಾಯಾಲಯದದಲ್ಲಿ ಹೂಡಿದ್ದ ದಾವೆಯ ಪರ ವಾದಿಸುತ್ತಿರುವ ವಕೀಲ ರವಿಕಿರಣ್ ಮುರಡೇಶ್ವರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಶೀರೂರು ಶ್ರೀಗಳು ‘ತಮ್ಮ ಜೀವಕ್ಕೆ ಅಪಾಯ ಇರುವ ಬಗ್ಗೆ ಮುಂಚೆಯೇ ತಮಗೆ ಹೇಳಿದ್ದರು’ ಎಂದಿದ್ದಾರೆ.

‘ಜೂನ್ 28 ರಂದು ತಮ್ಮ ಕಚೇರಿಗೆ ಬಂದಿದ್ದ ಶೀರೂರು ಶ್ರೀಗಳು , ಪುತ್ತಿಗೆ ಮಠವನ್ನು ಹೊರತುಪಡಿಸಿ ಉಳಿದ ಆರು ಮಠಗಳ ವಿರುದ್ಧ ಕ್ರಿಮಿನಲ್ ಸಲ್ಲಿಸಲು ತಮಗೆ ಸೂಚನೆ ನೀಡಿದ್ದರು. ಎಂದು ಅವರು ವಕೀಲ ರವಿಕಿರಣ್ ಹೇಳಿದ್ದಾರೆ.

‘ಶ್ರೀಗಳು ತಮ್ಮ ಜೀವಕ್ಕೆ ಅಪಾಯವೂ ಆಗಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು ಹಾಗಾಗಿ ಆರೂ ಮಠಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿದ್ದರು, ಅದರಂತೆ ನಾನು ನಿನ್ನೆಯಷ್ಟೆ ಫಿರ್ಯಾದು ಸಹ ಸಿದ್ಧ ಪಡಿಸಿದ್ದೆ’ ಎಂದು ವಕೀಲ ರವಿಕಿರಣ್ ಮಾಹಿತಿ ನೀಡಿದ್ದಾರೆ.

ಶೀರೂರು ಶ್ರೀಗಳ ಸಾವಿನ ಸಮರ್ಪಕ ತನಿಖೆ ಆಗಬೇಕು, ಅವರ ಸಾವಿನ ಕಾರಣ ಬಹಿರಂಗವಾಗಬೇಕು ಅವರ ಹೋರಾಟ ವ್ಯರ್ಥವಾಗಬಾರದು ಎಂದು ರವಿಕರಣ್ ಅವರು ಆಗ್ರಹಿಸಿದ್ದಾರೆ.

ಶೀರೂರು ಶ್ರೀಗಳು ಫುಡ್‌ಪಾಯಸನ್‌ಗೆ ಒಳಗಾಗಿದ್ದರು ಎಂದು ವೈದ್ಯರು ಹೇಳಿದ್ದು, ವಿಷಪ್ರಾಶನದ ಶಂಕೆಯನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ಇದೀಗ ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ವರದಿ ಬಂದ ಬಳಿಕವಷ್ಟೆ ಸಾವಿಗೆ ನಿಖರ ಕಾರಣ ತಿಳಿಯಲಿದೆ. (ಎನ್.ಬಿ)

Leave a Reply

comments

Related Articles

error: