ಕರ್ನಾಟಕಪ್ರಮುಖ ಸುದ್ದಿಮೈಸೂರು

ಬರ ಪರಿಶೀಲನಾ ಸಭೆ :ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಿ ಕಾಗೋಡು ಸಲಹೆ

govt-house-1-web-1ಕುಡಿಯುವ ನೀರು ಅತ್ಯಂತ ಪ್ರಮುಖವಾಗಿದ್ದು, ಎಷ್ಟೇ ಖರ್ಚಾದರೂ ನೀರು ಕೊಡಲೇಬೇಕು. ಟ್ಯಾಂಕರ್ ಮೂಲಕ ತಾತ್ಕಾಲಿಕವಾಗಿ ನೀರು ಒದಗಿಸಲು ವ್ಯವಸ್ಥೆ ಮಾಡಬೇಕೆಂದು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ  ಹೇಳಿದರು.

ಬರ ಅಧ್ಯಯನಕ್ಕಾಗಿ ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿಯ ನೇತೃತ್ವ ವಹಿಸಿರುವ ಕಂದಾಯ ಸಚಿವರು ಶುಕ್ರವಾರ ಮೈಸೂರು ಜಿಲ್ಲೆಯ ಬರ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಬರಪರಿಸ್ಥಿತಿ ನಿಭಾಯಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 60 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕೆಲವು ಗುತ್ತಿಗೆದಾರರು ಬೇಗ ಕೆಲಸ ಮಾಡುತ್ತಾರೆ. ಕೆಲವರು ವಿಳಂಬ ಮಾಡುತ್ತಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಎಲ್ಲ ಕ್ಷೇತ್ರಗಳಲ್ಲೂ ತ್ವರಿತವಾಗಿ ಕೆಲಸವಾಗುವಂತೆ ನಿಗಾ ವಹಿಸಬೇಕು ಎಂದರು.

ಟಾಸ್ಕಪೋರ್ಸ್ ಸಮಿತಿ ವತಿಯಿಂದ ಬರ ಕಾಮಗಾರಿ ಕೆಲಸ ತೆಗೆದುಕೊಳ್ಳಲು ಹಣ ಬಿಡುಗಡೆ ಮಾಡಿದೆ ಯಾವ ಉದ್ದೇಶಕ್ಕಾಗಿ ಹಣ ಬಿಡುಗಡೆ ಮಾಡಿದೆ ಅದೇ ಉದ್ದೇಶಕ್ಕೆ ಬಳಕೆಯಾಗಿರಬೇಕು. ಈ ಬಗ್ಗೆ ಸರ್ಕಾರಕ್ಕೆ ಒಂದು ವಾರದೊಳಗೆ ವರದಿ ನೀಡಬೇಕು ಎಂದು ತಿಳಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಪರಿಶೀಲಿಸಿದ ಅವರು ಕಾಮಗಾರಿ ಪೂರ್ಣಗೊಂಡಿರುವ ಆರ್‍ಒ ಘಟಕಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದೆಯೇ ಎಂದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ಮಾತನಾಡಿ ಮೈಸೂರು ತಾಲ್ಲೂಕಿನ ಜಯಪುರ, ಇಲವಾಲ ಹಾಗೂ ಕಸಬಾ ಹೋಬಳಿಗಳ ಜಟ್ಟಿಹುಂಡಿ, ಕೆ.ಹೆಮ್ಮನಹಳ್ಳಿ, ಹಿನಕಲ್, ಕೆ. ಮಾದಹಳ್ಳಿ, ಮದ್ದೂರ ಹುಂಡಿ, ಕೇರ್ಗಹಳ್ಳಿ, ಕೂರ್ಗಹಳ್ಳಿ ಗ್ರಾಮಗಳಿಗೆ ಪ್ರತಿ ದಿನ ನೀರು ಸರಬರಾಜು ಮಾಡಲು 12 ಟ್ಯಾಂಕರ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಈ ಟ್ಯಾಂಕರ್‍ಗಳು   ಪ್ರತಿ ದಿನ 3 ರಿಂದ 5  ಟ್ರಿಪ್ ನೀರು ಸರಬರಾಜು ಮಾಡುತ್ತಿದೆ. ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿಯ ಕಸುವಿನಹಳ್ಳಿ ಗ್ರಾಮಕ್ಕೆ  ಪ್ರತಿ ದಿನ ನೀರು ಸರಬರಾಜು ಮಾಡಲು 2 ಟ್ಯಾಂಕರ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಈ ಟ್ಯಾಂಕರ್‍ಗಳು   ಪ್ರತಿ ದಿನ 2  ಟ್ರಿಪ್ ನೀರು ಸರಬರಾಜು ಮಾಡುತ್ತಿದೆ ಎಂದರು.

ಮುಂಬರುವ ದಿನಗಳಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ 71 ಗ್ರಾಮಗಳಿಗೆ, ಹುಣಸೂರು ತಾಲ್ಲೂಕಿನ 79 ಗ್ರಾಮಗಳಿಗೆ, ಮೈಸೂರು ತಾಲ್ಲೂಕಿನ 30 ಹಾಗೂ ನಂಜನಗೂಡು ತಾಲ್ಲೂಕಿನ 86 ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು ಎಂದು ಅಂದಾಜಿಸಲಾಗಿದ್ದು, ಇದಕ್ಕಾಗಿ 861.84 ಲಕ್ಷ ರೂ. ಅನುದಾನದ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 31 ಕಾಮಗಾರಿಗಳನ್ನು ಕೈಗೊಂಡಿದ್ದು, ಇವುಗಳಲ್ಲಿ 10 ಕಾಮಗಾರಿಗಳು ಪೂರ್ಣಗೊಂಡಿದ್ದು, 16 ಪ್ರಗತಿಯಲ್ಲಿರುತ್ತದೆ. 5 ಕಾಮಗಾರಿಗಳು ಪ್ರಾರಂಭಿಕ ಹಂತದಲ್ಲಿದ್ದು, ಈ ಯೋಜನೆಗಳಿಗೆ 347.67 ಕೋಟಿ ರೂ. ಅನುದಾನದ ಅವಶ್ಯಕತೆ ಇರುತ್ತದೆ.

2016-17ರ ಮುಂಗಾರು ಹಂಗಾಮಿನಲ್ಲಿ ಮಳೆಯ ಅಭಾವದಿಂದ ಮೈಸೂರು ಜಿಲ್ಲೆಯಲ್ಲಿ 1,33,987 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ 1,24,532 ಹೆಕ್ಟೇರ್ ಪ್ರದೇಶ ಶೇ. 33ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾಗಿದ್ದು,  ಇದಕ್ಕಾಗಿ 9,122.08 ಲಕ್ಷ ರೂ. ಇನ್‍ಪುಟ್ ಸಬ್ಸಿಡಿಯ ಅವಶ್ಯಕತೆ ಇರುತ್ತದೆ.

2016ರ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ-32,001 ಹೆಕ್ಟೇರ್, ಹತ್ತಿ-30,763, ಅಲಸಂದೆ-17,196, ರಾಗಿ-12,472, ಭತ್ತ- 11,781 ಹಾಗೂ ಇತರೆ- 20,319 ಹೆಕ್ಟೇರ್ ಪ್ರದೇಶದಲ್ಲಿ  ಶೇ. 33 ಕ್ಕಿಂತ ಬೆಳೆ ಹಾನಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಕೆ. ಆರ್. ರಮೇಶ್ ಕುಮಾರ್, ಯು.ಟಿ. ಖಾದರ್, ಶಾಸಕರಾದ ವಾಸು, ಸಾ.ರಾ.ಮಹೇಶ್, ಚಿಕ್ಕಮಾದು, ಹೆಚ್.ಪಿ. ಮಂಜುನಾಥ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಲಕ್ಷ್ಮಿನಾರಾಯಣ್, ಮೈಸೂರು ಪ್ರಾದೇಶಿಕ ಆಯುಕ್ತರಾದ ಎಂ.ವಿ.ಜಯಂತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು

Leave a Reply

comments

Related Articles

error: