ಪ್ರಮುಖ ಸುದ್ದಿ

ನಕಲಿ ಚಿನ್ನದ ಲಕ್ಷ್ಮೀ ಕಾಸು, ಕೊಳವೆ ಮಾರಾಟ ಜಾಲ ಬೆಳಕಿಗೆ : ವಂಚಕರನ್ನು ಸೆರೆಹಿಡಿಯುವಂತೆ ಒತ್ತಾಯ

ರಾಜ್ಯ(ಮಂಡ್ಯ)ಜು.20:- ಪಾಂಡವಪುರ ಪಟ್ಟಣದಲ್ಲಿ ನಕಲಿ ಚಿನ್ನದ  ಲಕ್ಷ್ಮೀ ಕಾಸು, ಕೊಳವೆ  ಮಾರಾಟ ಜಾಲ ಬೆಳಕಿಗೆ ಬಂದಿದೆ.

ಮಹಿಳೆಯರ ತಂಡವೊಂದು ಸ್ಲಂ ಬಡಾವಣೆ, ಜನಸಂದಣಿ ಸ್ಥಳದಲ್ಲಿ ಮಹಿಳೆಯರಿಗೆ ನಕಲಿ ಚಿನ್ನದ  ಲಕ್ಷ್ಮೀ ಕಾಸು, ಕೊಳವೆ  ಮಾರಾಟ ಮಾಡುತ್ತಿದೆ. ನಕಲಿ‌‌ ಚಿನ್ನದ ಕಾಸನ್ನು‌ ಹಿತ್ತಾಳೆ ಪದಾರ್ಥದಿಂದ ತಯಾರಿಸಿ  ಮಾರಾಟ ಮಾಡಲಾಗುತ್ತಿದೆ. ಗೃಹಿಣಿಯರು ತಾಳಿ ಜೊತೆ ಹಾಕುವ ಲಕ್ಷ್ಮೀ ಕಾಸು, ತಮಿಳರು ಹಾಕಿಕೊಳ್ಳುವ ಕೊಳವೆಯನ್ನು ಇದೀಗ ಮಹಿಳೆಯರ ತಂಡ ನಕಲಿ ತಯಾರಿಸಿ ಮಾರಾಟ ಮಾಡುತ್ತಿದ್ದು, ನೋಡಲು ಅಸಲಿ‌ ಚಿನ್ನದಂತೆ ಕಾಣಿಸುತ್ತದೆ. ನಕಲಿ ಚಿನ್ನದ ಲಕ್ಷ್ಮೀ ಕಾಸಿನಲ್ಲಿ ಲಕ್ಷ್ಮೀ ಚಿತ್ರ, 22 ಕ್ಯಾರೇಟ್ ಗೋಲ್ಡ್, ಇಸವಿ ಮುದ್ರಿಸಲಾಗಿದೆ. ನಕಲಿ ಚಿನ್ನದ ಲಕ್ಷ್ಮೀ ಕಾಸನ್ನು 500, 1000 ರೂಪಾಯಿ ಕೊಟ್ಟರೆ ಸಾಕು ತಕ್ಷಣ ಕೊಡುತ್ತಾರೆ. ನಕಲಿ ಲಕ್ಷ್ಮೀ ಕಾಸಿನ ನಿಜವಾದ ಬೆಲೆ ಕೇವಲ 30 ರೂ ಅಥವಾ 40ರೂ. ಮಹಿಳೆಯರ ತಂಡ ಪ್ರತ್ಯೇಕವಾಗಿ ನಕಲಿ‌ ಲಕ್ಷ್ಮೀ ಕಾಸನ್ನು‌ ಹಿಡಿದುಕೊಂಡು ಕೆಲ ವೈಯುಕ್ತಿಕ ಕಷ್ಟ, ಸಮಸ್ಯೆ ಹೇಳಿಕೊಂಡು ಅಳುತ್ತಾ ಹೆಂಗಸರನ್ನು ನಂಬಿಸಿ ಮಾರಾಟ ಮಾಡುತ್ತಿದ್ದಾರೆ. ನಂಬಿ‌ ಮೋಸ ಹೋದ ಮಹಿಳೆಯೊಬ್ಬರು ಚಿನ್ನದ ಅಂಗಡಿಯಲ್ಲಿ ಪರೀಕ್ಷಿಸಿದಾಗ ನಕಲಿ‌ ಜಾಲವೆಂಬುದು‌ ಬಹಿರಂಗಗೊಂಡಿದೆ. ಮಹಿಳೆಯರು ಚಿನ್ನದ ಅಂಗಡಿಗೆ ಗಿರಿವಿಗೆಂದು ಹೋದಾಗ ನಕಲಿ ಎಂದು ಗೊತ್ತಾಗಿದೆ. ಪಾಂಡವಪುರ ಜ್ಯೂವೆಲ್ಲರಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಅವರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಇದೇ ರೀತಿ ಪಾಂಡವಪುರ ಪಟ್ಟಣದಲ್ಲಿ ನೂರಾರು ಪ್ರಕರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೋಸಕ್ಕೆ ಒಳಗಾದ ಮಹಿಳೆಯರು ನಕಲಿ‌ ಲಕ್ಷ್ಮೀ ಕಾಸನ್ನು ಪಾಂಡವಪುರ ಪೊಲೀಸರಿಗೆ ನೀಡಿದ್ದಾರೆ. ನಕಲಿ ಚಿನ್ನ ಮಾರಾಟ ಮಾಡುತ್ತಿರುವ ಜಾಲವನ್ನು ಬೇಧಿಸಿ ಅವರನ್ನು ಪೊಲೀಸರು ಸೆರೆಹಿಡಿಯಬೇಕೇಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: