ಮೈಸೂರು

ಮಹಿಳೆಯರು ದೈಹಿಕವಾಗಿ-ಮಾನಸಿಕವಾಗಿ ಸದೃಢರಾಗಿರಬೇಕು : ಡಿ.ರಂದೀಪ್

ಮೈಸೂರಿನ ಕುವೆಂಪುನಗರದ ಸುವರ್ಣ ಭವನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಆಯುಷ್ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯುಷ್ ಪದ್ಧತಿ ಮೂಲಕ ಗರ್ಭಿಣಿ ಮಹಿಳೆಯರ ಆರೋಗ್ಯ ಸುಧಾರಣೆ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಾಗಾರವನ್ನು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾಗ ಮಾತ್ರ ದೇಶ ಸದೃಢವಾಗಿರಲಿದೆ. ಇತ್ತೀಚೆಗೆ ಕಲುಷಿತ ವಾತಾವರಣ ಹೆಚ್ಚುತ್ತಿದ್ದು, ಆರೋಗ್ಯಕ್ಕೆ ಸಂಬಂಧಿಸಿದಂತೆ ಆಯುಷ್ ಪದ್ಧತಿಯು ಸೂಕ್ತವಾಗಿದೆ ಎಂದು ಹೇಳಿದರು. ಯೋಗ ಪ್ರಕ್ರಿಯೆ ಮತ್ತು ಸಾಂಪ್ರದಾಯಿಕ ಔಷಧಗಳಿಗೆ ಹೆಚ್ಚು ಒತ್ತು ನೀಡಬೇಕು. ಪ್ರಸವ ಸಂದರ್ಭದಲ್ಲಿ ತಾಯಿ ಮತ್ತು ಶಿಶು ಮರಣದಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಸುಲಭ ಹೆರಿಗೆ, ತಾಯಿ ಕಾರ್ಡ್ ಕುರಿತು ವಿವರ, ರಕ್ತ ಹೀನತೆ ವೇಳೆ ತಾಯಿ ಮಗುವನ್ನು ಹೇಗೆ ಆರೋಗ್ಯಕರವಾಗಿ ನೋಡಿಕೊಳ್ಳಬೇಕು ಎನ್ನುವ ವಿಷಯಗಳ ಕುರಿತು ವಿವರಿಸಲಾಯಿತು.

ಆಯುರ್ವೇದ  ವೈದ್ಯೆ ಡಾ.ರಂಜಿನಿ ಕಾರ್ತಿಕ್ , ಡಾ.ಅನಿತಾ, ಡಾ.ಲಕ್ಷ್ಮೀಶ್ ಸುಲಭ ಹೆರಿಗೆ, ಶಿಶುವಿನ ಪಾಲನೆ, ಪೋಷಣೆ ಕುರಿತು ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಉಪಮೇಯರ್ ರತ್ನ ಲಕ್ಷ್ಮಣ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ ರಾಜಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ.ರಾಧಾ, ಜಿಪಂ ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮಿ,  ವೈದ್ಯಾಧಿಕಾರಿ ಕೆ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: