ಪ್ರಮುಖ ಸುದ್ದಿಮೈಸೂರು

ಅಧಿಕಾರಿಗೆ ಕಾಂಗ್ರೆಸ್‍ ಮುಖಂಡನಿಂದ ಧಮ್ಕಿ

ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪ ನಿರ್ದೇಶಕ ದೇವರಾಜ್‍ ಅವರಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎಲ್. ಬಸವರಾಜ ನಾಯ್ಕ ಧಮ್ಕಿ ಹಾಕಿದ ಪ್ರಕರಣ ನಡೆದಿದೆ.

ಮಹಿಳಾ ಉದ್ಯೋಗಿಯಾಗಿರುವ ಮಂಡಳಿಯ ಹುಣಸೂರು ವಿಸ್ತರಣಾಧಿಕಾರಿ ಇತ್ತೀಚಿಗೆ ರಜೆ ಹಾಕಿದ್ದರು. ಆದರೆ, ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ(ಫಿಸಿಕಲ್ ಫಿಟ್ನೆಸ್ ಸರ್ಟಿಫಿಕೇಟ್) ನೀಡದ ಹಿನ್ನೆಲೆಯಲ್ಲಿ ಉಪ ನಿರ್ದೇಶಕರು ರಜೆ ವೇತನ ಮಂಜೂರು ಮಾಡಿರಲಿಲ್ಲ.

ಇದನ್ನು ಕೇಳಲೊಪ್ಪದ ಬಸವರಾಜ ನಾಯ್ಕ, ಆ ಮಹಿಳೆ ಸಮೇತ ಸುಮಾರು 10ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಚೇರಿಗೆ ನುಗ್ಗಿ, ಕಚೇರಿಯ ಸಿಬ್ಬಂದಿಯನ್ನು ಅಧಿಕಾರಿಯಿದ್ದ ಕೊಠಡಿಗೆ ಬಿಡದಂತೆ ದಿಗ್ಬಂಧನ ಹಾಕಿದ್ದರೆನ್ನಲಾಗಿದೆ. ಸಿಬ್ಬಂದಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ನನಗೆ ಸಿಎಂ ಗೊತ್ತು, ಸಚಿವ ರುದ್ರಪ್ಪ ಲಮಾಣಿ ಗೊತ್ತು. ಎಲ್ಲರೂ ಗೊತ್ತು. ನೀನು ರಜಾ ವೇತನ ಸರಿ ಮಾಡದಿದ್ದರೆ ಲೈಂಗಿಕ ಕಿರುಕುಳ ಕೊಡುತ್ತಿದ್ದೆ, ಮಾನಸಿಕ ಹಿಂಸೆ ಕೊಡುತ್ತಿದ್ದೆ ಎಂದು ದೂರು ಕೊಟ್ಟು ನಿನ್ನನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಮಹಿಳಾ ಉದ್ಯೋಗಿಗೆ ನಾನು ಯಾವುದೇ ರೀತಿಯ ತೊಂದರೆ ನೀಡಿಲ್ಲ. ರಜಾ ವೇತನ ಸಿಗಬೇಕಾದರೆ ಫಿಸಿಕಲ್ ಫಿಟ್ನೆಸ್ ಸರ್ಟಿಫಿಕೆಟ್ ಸಲ್ಲಿಸಬೇಕಾದುದು ಕಡ್ಡಾಯ. ಅದನ್ನು ಸಮರ್ಪಕವಾಗಿ ಕೊಡದೆ ರಾಜಕಾರಣಿಗಳ ಮುಖಾಂತರ ನನಗೆ ಧಮ್ಕಿ ಹಾಖಿಸುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಆಕೆಯನ್ನು ಬೆಂಬಲಿಸಿ ಬಂದ ಬಸವರಾಜ ನಾಯ್ಕ, ನನ್ನನ್ನು ನಿಂದಿಸಿ, ಬೆದರಿಕೆ ಹಾಕಿ ಹೋಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ದೇವರಾಜ್ ತಿಳಿಸಿದ್ದಾರೆ.

Leave a Reply

comments

Related Articles

error: