ಕರ್ನಾಟಕ

ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧ ಮಾಲೆಯಡಿ 11 ಸಂಪುಟ ಪ್ರಕಟ

ಬೆಂಗಳೂರು (ಜುಲೈ 20): ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧ ಮಾಲೆಯಡಿ ಸುಮಾರು 11 ಸಂಪುಟಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತರುತ್ತಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ಖ್ಯಾತ ಸಾಹಿತಿ ಡಾ: ನಾ. ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬುಧವಾರ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾದ ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧ ಮಾಲೆ ಸಮೂಹ ಮಂಥನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ದಲಿತರು ಬದುಕಿನಲ್ಲಿ ಕಂಡ ನೈಜ ಸಂಗತಿಗಳನ್ನು ಹಂಚಿಕೊಳ್ಳುವುದು ಬಹಳ ಮುಖ್ಯವಾಗಿದೆ. ಇವರ ಬಗ್ಗೆ ಶೋಧನೆ ಹಿಂದೆಯೇ ನಡೆಯಬೇಕಿದ್ದು, ಈಗ ಈ ಸಂಶೋಧನೆ ಬಗ್ಗೆ ಸಂಪುಟಗಳನ್ನು ತರುತ್ತಿರುವುದು ಸ್ವಾಗತಾರ್ಹ. ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಾದ ತಳಮಳ, ಸಾಮಾಜಿಕ, ನೈತಿಕ, ಧಾರ್ಮಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಲು ಇದು ವೇದಿಕೆಯಾಗಬಲ್ಲದು. ಜಾತಿ ತೊಡೆದು ಹಾಕಿ ಬಾಳ್ವೆ ನಡೆಸಲು ಮುಂದಾಗಿರುವ ಈ ಸಮಾಜದ ನಡುವೆಯೇ ಇನ್ನೂ ಜಾತಿ ಪದ್ಧತಿ ಮುಂದುವರೆದಿದೆ. ಈ ಸತ್ಯವನ್ನು ನಾವು ಎದುರಿಸಲೇಬೇಕಾಗಿದೆ ಎಂದರು.

ಸತ್ಯ ಸಂಗತಿಗಳ ಆಧಾರದ ಮೇಲೆ ಸಂಶೋಧನೆ ನಡೆಸಿ ಸೂಕ್ತ ಫಲಿತಾಂಶದ ನಿರೀಕ್ಷೆ ಮಾಡಬೇಕಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಕ್ರೈಸ್ತ ಮಿಷನರಿಗಳು ಧರ್ಮದ ಪ್ರಚಾರದ ಜೊತೆಗೆ ಹಲವಾರು ದಲಿತರನ್ನು ತಮ್ಮ ಧರ್ಮಕ್ಕೆ ಮತಾಂತರಿಸಿದರು. ಮತಾಂತರಗೊಂಡ ಕ್ರೈಸ್ತರು ಹಾಗೂ ನೈಜ ಕ್ರೈಸ್ತರ ನಡುವೆ ತಾರತಮ್ಯ ಧೋರಣೆ ತೋರಲಾಯಿತು. ಇವರಿಗೆ ಯಾವುದೇ ಮೀಸಲಾತಿ ಕಲ್ಪಿಸಿರಲಿಲ್ಲ. ಇವರು ಕೀಳರಿಮೆಯಿಂದ ನಲುಗಿದರು ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ ಅವರು ದಲಿತ ಕ್ರೈಸ್ತ ಸಾಂಸ್ಕøತಿಕ ಶೋಧ ಮಾಲೆ ಸಮೂಹ ಮಂಥನ ರಾಜ್ಯದ 4 ವಿಭಾಗಗಳಾದ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳಲ್ಲಿ ನಡೆಯಲಿದೆ. ಇಲ್ಲಿ ವಿಭಾಗವಾರು ಸಮೂಹ ಮಂಥನ ಕ್ಷೇತ್ರಕಾರ್ಯ ಹಾಗೂ ಅಧ್ಯಯನಗಳು ನಡೆಯಲಿದೆ.

ಇಲ್ಲಿ ವಿಭಾಗವಾರು ತಲಾ ಒಬ್ಬರು ಸಂಪಾದಕರು ಹಾಗೂ ಎಲ್ಲಾ ಜಿಲ್ಲೆಗಳಿಂದ ಸಂಶೋಧಕರನ್ನು ಗುರುತಿಸಲಾಗಿದೆ. ಇವರು ಮೇಲ್ಕಂಡ ವಿಷಯ ಕುರಿತು ತಮ್ಮ ಜಿಲ್ಲೆಗಳ ಸಾಂಸ್ಕೃತಿಕ ಚಿಂತನೆಯನ್ನು ಸಿದ್ದಪಡಿಸಿ ನೀಡುವರು. ಇದನ್ನು 10 ಸಂಪುಟಗಳಲ್ಲಿ ಸಿದ್ದಪಡಿಸಿ, 11 ನೇ ಸಂಪುಟದಲ್ಲಿ ಈ ಅಧ್ಯಯನದ ಪೂರ್ಣ ಸಾರಾಂಶ ಹಾಗೂ ಗಮನಿಸಲಾದ ಅಂಶಗಳನ್ನು ಪ್ರಕಟಿಸಲಾಗುವುದು. ಮುಂದಿನ 2 ವರ್ಷದೊಳಗೆ ಈ ಅಧ್ಯಯನ ಪೂರ್ಣಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಶೋಧನೆ ಮಾಲಿಕೆಯ ಸಂಯೋಜಕರಾದ ಡಾ. ಕೆ. ಖಂಡೋಬಾ, ಡಾ: ಪ್ರಶಾಂತ್ ನಾಯಕ್, ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಅವರು ಉಪಸ್ಥಿತರಿದ್ದರು. ಸಾಹಿತಿಗಳಾದ ಡಾ. ಬೈರಮಂಗಳ ರಾಮೇಗೌಡ ಕಾರ್ಯಕ್ರಮ ನಿರೂಪಿಸಿದರು.(ಎನ್.ಬಿ)

Leave a Reply

comments

Related Articles

error: