ಪ್ರಮುಖ ಸುದ್ದಿ

ಹಾಲಿನ ಮಾರಾಟ ದರ ಏರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ : ಸಚಿವ ವೆಂಕಟರಾವ್ ನಾಡಗೌಡ

ರಾಜ್ಯ(ಬೆಂಗಳೂರು), ಜು. 20:-  ರಾಜ್ಯದಲ್ಲಿ ಹಾಲಿನ ಮಾರಾಟ ದರ ಏರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಹಾಲು ಒಕ್ಕೂಟಗಳು 3 ರೂ. ಪ್ರೋತ್ಸಾಹ ಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಹಾಲಿನ ಮಾರಾಟ ಏರಿಕೆ ಪ್ರಸ್ತಾಪ ಇಲ್ಲ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ಎಲ್ಲೂ ಹಾಲನ್ನು ರಸ್ತೆಗೆ ಸುರಿದಿಲ್ಲ. ಕೆಲವೆಡೆ ಪ್ರತಿಭಟನೆಗಾಗಿ ಆ ರೀತಿ ಮಾಡಿರಬಹುದು. ಸರ್ಕಾರ ಹಾಲಿಗೆ ಈಗಾಗಲೇ 5 ರೂ.ಪ್ರೋತಾಹ ಧನ ನೀಡುತ್ತಿದೆ. ದರ ಕಡಿಮೆ ಮಾಡುವುದಿಲ್ಲ. ಖರೀದಿ ದರದಲ್ಲಿ ಹಾಲು ಒಕ್ಕೂಟಗಳೇ 2 ರೂ. ಕಡಿಮೆ ಮಾಡಿವೆ ಎಂದರು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಾಲಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭವಾಗುತ್ತಿಲ್ಲ. ನಂದಿನಿ ಉತ್ಪನ್ನಗಳು ಬೇರೆ ಸಂಸ್ಥೆಗಳ ಜತೆ ಸ್ಪರ್ಧಿಸುವಂತಹ ಪರಿಸ್ಥಿತಿ ಇದೆ ಎಂದರು.

ಹೊರ ರಾಜ್ಯಗಳಿಂದ ಬರುತ್ತಿರುವ ಹಾಲಿನಲ್ಲಿ ಕಲಬೆರಕೆ ಹೆಚ್ಚಾಗಿದೆ. ಈ ಬಗ್ಗೆ ಚರ್ಚಿಸಿ ಅನ್ಯ ರಾಜ್ಯಗಳ ಹಾಲು ಮಾರಾಟ ನಿರ್ಬಂಧಿಸಲಾಗುವುದು. ಅವಕಾಶವಿದ್ದರೆ ಆ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಮೀನುಗಾರ ಮಹಿಳೆಯರಿಗೆ 50 ಸಾವಿರ ರೂ.ಗಳವರೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಇದುವರೆಗೂ ಸಹಕಾರ ಸಂಘಗಳ ಮೂಲಕ ಈ ಸಾಲ ನೀಡಲಾಗುತ್ತಿತ್ತು. ಈಗ ನೇರವಾಗಿ ಮೀನುಗಾರ ಮಹಿಳೆಯರಿಗೆ ಸಾಲ ವಿತರಿಸುವ ಚಿಂತನೆ ಇದೆ ಎಂದರು.

ಬುಟ್ಟಿಯಲ್ಲಿ ಮೀನು ಹೊತ್ತು ಮಾರಾಟ ಮಾಡುವ ಮಹಿಳೆಯರಿಗೆ 50 ಸಾವಿರ ರೂ.ಗಳವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ಹೇಳಿದರು. ಮೀನುಗಾರರ ಬೋಟ್‌ಗಳಿಗೆ ಸಬ್ಸಿಡಿ ಸಹಿತ ಸೀಮೆಎಣ್ಣೆ ಸರಬರಾಜು ಮಾಡುವುದನ್ನು ಆಹಾರ ಮತ್ತು ನಾಗರಿಕ ಇಲಾಖೆ ನಿಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ಜರ್ಮನಿ ನಿರ್ಮಿತ ಬ್ಯಾಟರಿ ಚಾಲಿತ ಬೋಟ್‌ಗಳ ವಿತರಣೆಗೆ ಚಿಂತನೆ ನಡೆದಿದೆ. ಈ ತಿಂಗಳು ಮೀನುಗಾರಿಕೆ ರಜೆ ಮುಗಿದ ನಂತರ ಪ್ರಾಯೋಗಿಕವಾಗಿ ಒಂದೆರಡು ಬ್ಯಾಟರಿ ಚಾಲಿತ ಮೋಟಾರ್ ಬೋಟ್‌ಗಳನ್ನು ಬಳಸಿ ಅದು ಯಶಸ್ವಿಯಾದಲ್ಲಿ ಸಬ್ಸಿಡಿ ದರದಲ್ಲಿ ಬ್ಯಾಟರಿ ಚಾಲಿತ ಬೋಟ್‌ಗಳನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದಾಗಿ ಹೇಳಿದರು. ಗೋವಾ ಮಾದರಿಯಲ್ಲಿ ರಾಜ್ಯದಲ್ಲೂ ತೇಲುವ ಜಟ್ಟಿಗಳ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಅಧಿಕಾರಿಗಳು ಗೋವಾಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುತ್ತಾರೆ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: