ಪ್ರಮುಖ ಸುದ್ದಿ

ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿ : ಅಧಿಕಾರಿಗಳಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೂಚನೆ

ರಾಜ್ಯ(ಮಡಿಕೇರಿ) ಜು.20 :- ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ಅರಿತು ಸೂಕ್ಷ್ಮವಾಗಿ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಮುಖ್ಯಮಂತ್ರಿ ಅವರು ಮಾತನಾಡಿದರು.  ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಿದ್ದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದರು.   ರಾಜ್ಯದ ಹಲವು ಭಾಗಗಳಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. ಅವುಗಳನ್ನು ತಿಳಿದು ಪ್ರಜ್ಞೆಯಿಂದ  ಕಾರ್ಯನಿರ್ವಹಿಸಬೇಕು. ಸರ್ಕಾರದ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.  ಮಳೆಯಿಂದ ಹಾನಿಯಾಗಿರುವ ರಸ್ತೆ, ಸೇತುವೆ, ವಾಸದ ಮನೆ, ಬೆಳೆಹಾನಿ, ವಿದ್ಯುತ್, ಹಾಗೆಯೇ ಸರ್ಕಾರಿ ಕಟ್ಟಡಗಳು ನಷ್ಟ ಸಂಬಂಧಿಸಿದಂತೆ ಈಗಾಗಲೇ ಸುಮಾರು 326 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಪರಿಹಾರ ಸಂಬಂಧ ಅಗತ್ಯ ಹಣ ಬಿಡುಗಡೆ ಮಾಡಲಾಗುವುದು. ರಸ್ತೆ, ಸೇತುವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಳೆಯಿಂದ ಹಾನಿಯಾಗಿರುವುದನ್ನು ಸರಿಪಡಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.  ಜೂನ್, ಜುಲೈ ಎರಡು ತಿಂಗಳು ಕೃಷಿ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ತೆರಳಿ ರೈತರಿಗೆ ಸಲಹೆ, ಮಾರ್ಗದರ್ಶನ ಹಾಗೂ ನೆರವು ನೀಡಬೇಕು. ಈ ಎರಡು ತಿಂಗಳುಗಳನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ಮಳೆಯಿಂದ ಹಾನಿಯಾಗಿರುವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಹೆಚ್ಚಿನ ನಿಬಂಧನೆಗಳನ್ನು ಹಾಕದೆ, ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಎಚ್.ಡಿ.ಕುಮಾರ ಸ್ವಾಮಿ  ಸಲಹೆ ಮಾಡಿದರು.  ಕಾಫಿ ಬೆಳೆಗಾರರಿಗೆ ಪರಿಹಾರ ವಿತರಣೆ ಮಾಡಬೇಕು. ಮಳೆಯಿಂದಾಗಿರುವ ನಷ್ಟ ಸಂಬಂಧ ಕಾಫಿ ಬೆಳೆಗಾರರನ್ನು ರಕ್ಷಣೆ ಮಾಡಬೇಕು. ಪರಿಸರ ಸಂರಕ್ಷಣೆಯು ಸಹ ಮಾಡಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಮಳೆಹಾನಿ ಪರಿಹಾರ ಸಂಬಂಧಿಸಿದಂತೆ ತಹಶೀಲ್ದಾರರು ನೇರವಾಗಿ ಪರಿಹಾರ ವಿತರಣೆ ಮಾಡುವಂತಾಗಬೇಕು. ಉಪ ವಿಭಾಗಾಧಿಕಾರಿಯವರ ನೇತೃತ್ವದಲ್ಲಿ ಸಮಿತಿ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಶೀಘ್ರದಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳ ಕುಟುಂಬದವರಿಗೆ ಪರಿಹಾರ ವಿತರಣೆ ಮಾಡಬೇಕು. ಅಂಗನವಾಡಿ, ಶಾಲಾ ಕಟ್ಟಡಗಳ ರಿಪೇರಿಗೆ ಹಣ ಬಿಡುಗಡೆ ಮಾಡಲಾಗುವುದು. ಈ ಸಂಬಂಧ ಪಟ್ಟಿಯನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಥಮ ದರ್ಜೆ ಕಾಲೇಜುಗಳು, ಪದವಿ ಪೂರ್ವ ಕಾಲೇಜುಗಳು ಹಾಗೂ ಪ್ರೌಢಶಾಲೆಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಆ ನಿಟ್ಟಿನಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೂ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ನೂತನ ಭವನ ನಿರ್ಮಾಣ ಕಾಮಗಾರಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಎಚ್.ಡಿ.ರೇವಣ್ಣ ಅವರು ಸಲಹೆ ಮಾಡಿದರು.  ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕೊಡವ ಹೆರಿಟೇಜ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು ಮಾತನಾಡಿ ಕೊಡವ ಹೆರಿಟೇಜ್ ಕಟ್ಟಡ ಸಂಬಂಧ ಗಂಭೀರವಾಗಿ ಪರಿಗಣಿಸಲಾಗುವುದು, ಈ ಸಂಬಂಧ ವರದಿ ಕಳುಹಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಯ ಇಇಗೆ ಸೂಚನೆ ನೀಡಿದರು. ಮೈಸೂರು-ಮಡಿಕೇರಿ-ಮಾಣಿ ಮಾರ್ಗದ ರಸ್ತೆ ಕಾಮಗಾರಿಗೆ ಡಿಪಿಆರ್. ಕರೆದು ಟೆಂಡರ್ ಆಹ್ವಾನಿಸುವಂತೆ ಲೋಕೋಪಯೋಗಿ ಎಂಜಿನಿಯರ್‍ಗಳಿಗೆ ಎಚ್.ಡಿ.ರೇವಣ್ಣ ಅವರು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಕೊಡ್ಲಿಪೇಟೆ-ಮಾಕುಟ್ಟ ರಸ್ತೆ ನಿರ್ಮಾಣ ಮಾಡಲು ಕೈಗೆತ್ತಿಕೊಳ್ಳಬೇಕಿದೆ. ಹಾಗೆಯೇ ಪಾಣತ್ತೂರು-ಕರಿಕೆ-ಭಾಗಮಂಡಲ ರಸ್ತೆ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು  ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.   ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭತ್ತದ ಸಸಿ ಮಡಿ ನಾಶವಾಗಿದ್ದು, ಇದರಿಂದ ಭತ್ತದ ಬೀಜವನ್ನು ಉಚಿತವಾಗಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಹಮ್ಮಿಯಾಲ-ಮುಟ್ಲು ಭಾಗದಲ್ಲಿ ಭತ್ತ ಬೆಳೆ ನಾಶವಾಗಿದ್ದು, ಈ ಪ್ರದೇಶಗಳಿಗೆ ಭೇಟಿ ನೀಡಿದ್ದೀರಾ ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಡಿ.ರೇವಣ್ಣ ಅವರು ತಹಶೀಲ್ದಾರರು, ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದರು.  ಕೆ.ಜಿ.ಬೋಪಯ್ಯ ಅವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗುತ್ತಿದೆ. ಆದರೆ ಮಡಿಕೇರಿ ತಾಲ್ಲೂಕಿನಲ್ಲಿ ಕಾಫಿ ಬೆಳೆ ನಷ್ಟವಾಗಿಲ್ಲ ಎಂದು ವರದಿ ನೀಡಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಎಚ್.ಡಿ.ರೇವಣ್ಣ ಅವರು ಕಾಫಿ ಬೋರ್ಡ್‍ನಲ್ಲಿ ಐಎಎಸ್ ಅಧಿಕಾರಿಗಳು ಕಾರ್ಯದರ್ಶಿಯಾಗಿದ್ದು, ಇವರು ಮೇಲುಸ್ತುವಾರಿ ನೋಡಿಕೊಳ್ಳಬೇಕು. ಆದರೆ ಮುಖ್ಯಮಂತ್ರಿ ಅವರು ಆಗಮಿಸಿರುವ ಸಭೆಗೆ ಬಂದಿಲ್ಲ. ಒಂದು ಅರ್ಜಿಗಳು ಬಂದಿಲ್ಲ ಎಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಬೋಜೇಗೌಡ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಹಲವು ವಿಚಾರಗಳ ಕುರಿತು ಮಾತನಾಡಿದರು. ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಇತರರು ಇದ್ದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಳೆ ಹಾನಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 108 ಲಕ್ಷ ರೂ., ಟೌನ್ ಪಂಚಾಯಿತಿ ವ್ಯಾಪ್ತಿಯಲ್ಲಿ 75 ಲಕ್ಷ ರೂ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 4,822 ಲಕ್ಷ ರೂ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 1263 ಲಕ್ಷ ರೂ., ಸಣ್ಣ ನೀರಾವರಿ 1190 ಲಕ್ಷ ರೂ., ಸೆಸ್ಕ್ ವ್ಯಾಪ್ತಿಯಲ್ಲಿ 131 ಲಕ್ಷ ರೂ., ಪಿಎಂಜಿ ಎಸ್‍ವೈ ವ್ಯಾಪ್ತಿಯಲ್ಲಿ 7 ಲಕ್ಷ ರೂ., ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ 113 ಲಕ್ಷ ರೂ., ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸುಮಾರು 326 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅವರು ಮಾಹಿತಿ ನೀಡಿದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: