ಪ್ರಮುಖ ಸುದ್ದಿ

ಭಯೋತ್ಪಾದನಾ ದಾಳಿ ಮತ್ತು ಸಮಾಜಘಾತುಕ ಕೃತ್ಯಗಳ ಬಗ್ಗೆ ನಿಗಾವಹಿಸಲು ಸೈಬರ್ ಭದ್ರತೆ ಪರಿಣಾಮಕಾರಿ ಸಾಧನೆ : ಡಾ. ಎಂ. ಅಣ್ಣಾದೊರೈ

ರಾಜ್ಯ(ಬೆಂಗಳೂರು) ಜು. 21 :- ಭಯೋತ್ಪಾದನಾ ದಾಳಿಗಳು ಮತ್ತು ಸಮಾಜಘಾತುಕ ಕೃತ್ಯಗಳ ಬಗ್ಗೆ ನಿಗಾವಹಿಸಲು ಅತ್ಯಾಧುನಿಕ ತಂತ್ರಜ್ಞಾನದ ಸೈಬರ್ ಭದ್ರತೆ ಪರಿಣಾಮಕಾರಿ ಸಾಧನೆ. ಆದರೆ ಅಸಮರ್ಥ ನಿರ್ವಹಣೆ ಹಾಗೂ ನಿರ್ಲಕ್ಷ್ಯ ವಹಿಸಿದರೆ ಅಷ್ಟೇ ಅಪಾಯಕಾರಿ ಎಂದು ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಡಾ. ಎಂ. ಅಣ್ಣಾದೊರೈ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಐಎಸ್‌ಎಸಿಎ ಆಯೋಜಿಸಿರುವ `ತಂತ್ರಜ್ಞಾನ ಛೇದನ -ಸೈಬರ್ ಭದ್ರತೆಯ ಸವಾಲುಗಳು` ಕುರಿತ 21ನೇ ವಾರ್ಷಿಕ ಕರ್ನಾಟಕ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ಸೈಬರ್ ಸೆಕ್ಯುರಿಟಿಗೆ ಅನೇಕ ಸವಾಲುಗಳಿವೆ. ಸೈಬರ್ ಸೆಕ್ಯುರಿಟಿಗೆ ಉಪಗ್ರಹಗಳನ್ನು ಬಳಸಲಾಗುತ್ತಿದೆ. ಸೈಬರ್ ಭದ್ರತಾ ವ್ಯವಸ್ಥೆ ಮಾಡಿದಾಗ ಡಾಟಾ ಕಳ್ಳತನವಾಗುವ ಆತಂಕ ಇದ್ದೇ ಇರುತ್ತದೆ. ಆದ್ದರಿಂದ ಡಾಟಾವನ್ನು ಆಗಾಗ ಬಳಸುತ್ತಿದ್ದರೆ ಸುರಕ್ಷಿತ ಎಂದು ಅಣ್ಣಾದೊರೈ ಹೇಳಿದರು. ಸೈಬರ್ ಸೆಕ್ಯುರಿಟಿ ತಂತ್ರಜ್ಞಾನದಿಂದ ದೇಶದ ಕಡಲು, ಗಡಿಪ್ರದೇಶ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ಕುಳಿತಲ್ಲಿಯೇ ನಿಗಾವಹಿಸಬಹುದು. ಆದರೆ ನಮ್ಮ ಭದ್ರತಾ ವ್ಯವಸ್ಥೆಯ ತಂತ್ರಜ್ಞಾನ ಡಾಟಾ ಆಗುಂತಕರಿಗೆ ಸಿಗದಂತೆ ಕಟ್ಟೆಚ್ಚರ ವಹಿಸುವುದು ಅತ್ಯವಶ್ಯಕ ಎಂದರು. ಕೇಂದ್ರ ಸರ್ಕಾರ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪ್ಯಾನ್‌ಕಾರ್ಡ್ ಎಲ್ಲದಕ್ಕೂ ಸಂಪರ್ಕ ಕಲ್ಪಿಸುವ ಯೋಜನೆಗೆ ಮುಂದಾಗಿದ್ದು ನಿಜಕ್ಕೂ ಸ್ವಾಗತಾರ್ಹ ಜೊತೆಗೆ ದೇಶದ ಭದ್ರತೆ ದೃಷ್ಟಿಯಿಂದ ಒಳ್ಳೆಯದು ಆದರೆ, ಒಂದು ನಕಾರಾತ್ಮಕ ವಿಷಯ ಅಂದರೆ ಖಾಸಗೀತನಕ್ಕೆ ಧಕ್ಕೆಯಾಗುತ್ತದೆ ಎಂದು ಅಣ್ಣಾ ದೊರೈ ಹೇಳಿದರು. ಬೆಂಗಳೂರಿನಂತಹ ಮಹಾನಗರಕ್ಕೆ ಸೈಬರ್ ಭದ್ರತೆ ಅತ್ಯವಶ್ಯಕ. ಭಯೋತ್ಪಾದನಾ ಕೃತ್ಯಗಳ ಬಗ್ಗೆ ನಿಗಾವಹಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಐಎಸ್‌ಎಸಿಎ ಬೆಂಗಳೂರು ವಿಭಾಗದ ಅಧ್ಯಕ್ಷ ಸಿ. ರಾಜಾರಾಮನ್ ಮಾತನಾಡಿ, ಈ ವರ್ಷದ ಸಮ್ಮೇಳನ ವಸ್ತು ಮಾಹಿತಿ ಭದ್ರತೆಯ ವೃತ್ತಿ ಪರರಿಗೆ ಆಸಕ್ತಿದಾಯಕ ಅವಕಾಶಗಳನ್ನು ಆವಿಷ್ಕರಿಸುವ ಉದ್ದೇಶ ಹೊಂದಿದೆ ಎಂದರು.

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿಗಳು, ವೃತ್ತಿಪರರು, ಸರ್ಕಾರದ ಪ್ರತಿನಿಧಿಗಳು ಮತ್ತು ಶಿಕ್ಷಣ ತಜ್ಞರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: