ಪ್ರಮುಖ ಸುದ್ದಿ

ಎಲ್ಲಾ ದಾಖಲೆಗಳನ್ನು ಪಡೆಯಬೇಕಾದ ಕೇಂದ್ರದಲ್ಲಿ ಸರಿಯಾದ ಸೌಲಭ್ಯವಿಲ್ಲ

ರಾಜ್ಯ(ಮಂಗಳೂರು)ಜು.21:- ಸಂಪೂರ್ಣ ಬಂಟ್ವಾಳ ತಾಲೂಕಿನ ಎಲ್ಲಾ ದಾಖಲೆಗಳು ಹಾಗೂ ಆದಾಯ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಲು ಒಂದೇ ಕೇಂದ್ರವಿದ್ದು, ನೂತನವಾಗಿ ನಿರ್ಮಿಸಲ್ಪಟ್ಟ ಮಿನಿ ವಿಧಾನಸೌಧದಲ್ಲಿ ಇದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಮಿನಿ ವಿಧಾನಸೌಧವು ಹೊರನೋಟಕ್ಕೆ ಭವ್ಯವಾಗಿ ಕಂಡರೂ ಒಳಗಿನ ಕಾರ್ಯಚಟುವಟಿಕೆಗಳು ಯಾವುದೂ ಸಮರ್ಪಕವಾಗಿ ನಡೆಯುತ್ತಿಲ್ಲ. ದಿನವೂ ಬಂದು ಸರತಿ ಸಾಲಿನಲ್ಲಿ ನಿಂತು ಹೋಗುವ ಜನರು ಹಿಡಿಶಾಪ ಹಾಕುತ್ತಲೇ ಮರಳುವಂತಹ ಪರಿಸ್ಥಿತಿ ಎದುರಾಗಿದೆ.

ಆರ್.ಟಿ.ಸಿ ಆಗಿರಲಿ, ಆದಾಯ ಮತ್ತು ಜಾತಿ ಪ್ರಮಾಣಪತ್ರವಾಗಲಿ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾದರೆ ಅಥವಾ ಪಡೆಯಬೇಕಾದರೆ ಯಾವುದಕ್ಕೂ ಪ್ರತ್ಯೇಕ ಕ್ಯೂ ವ್ಯವಸ್ಥೆಯಿಲ್ಲ. ಒಂದೇ ಕೌಂಟರ್ ನ ಮೂಲಕ ಎಲ್ಲವನ್ನೂ ನಡೆಸಲಾಗುತ್ತಿದೆ. ಅದು ಮಾತ್ರವಲ್ಲದೇ ಮಹಿಳೆಯರಿಗೂ, ಪುರುಷರಿಗೂ, ವೃದ್ಧರಿಗೂ ಒಂದೇ ಕ್ಯೂನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇದೆಯೇ ಹೊರತು ಅದಕ್ಕೂ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆಯನ್ನು ಮಾಡಲಾಗಿಲ್ಲ.

ಸಾಮಾಜಿಕ ಕಾರ್ಯಕರ್ತರೋರ್ವರು ಮಾತನಾಡಿ ಇಷ್ಟೊಂದು ಉತ್ತಮವಾಗಿ ಈ ಕಟ್ಟಡ ನಿರ್ಮಾಣವಾದ ಸಂದರ್ಭದಲ್ಲಿ, ಈ ತಾಲೂಕಿನ ಎಲ್ಲಾ ದಾಖಲೆ, ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುವುದು ಸುಲಭವಾಗಬಹುದೆಂದು ಅಂದುಕೊಂಡಿದ್ದೆ. ಆದರೆ, ಈಗ ಮೊದಲಿಗಿಂತಲೂ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಕರೆಂಟ್ ಹೋದರೆ ಯಾವುದೇ ರೀತಿಯ ಬ್ಯಾಕಪ್ ಸಿಸ್ಟಮ್ ಇಲ್ಲ. ಜನರೇಟರ್ ವ್ಯವಸ್ಥೆಯೂ ಇಲ್ಲ. ಕರೆಂಟ್ ಬರುವವರೆಗೂ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಯಾರೂ ಕೂಡಾ ಗಮನ ಹರಿಸುತ್ತಿಲ್ಲ ಎಂದಿದ್ದಾರೆ.  ಬಂಟ್ವಾಳ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಿಸಿದ್ದು ನಿಜಕ್ಕೂ ಉತ್ತಮ ವಿಚಾರ. ಇದರ ಎಲ್ಲಾ ವ್ಯವಸ್ಥೆಗಳ್ನನು ಚೊಕ್ಕಗೊಳಿಸಿ, ಅವ್ಯವಸ್ಥೆಗಳನ್ನು ಹೋಗಲಾಡಿಸಬೇಕಾಗಿದೆ. ಇದರಿಂದಾಗಿ ಹಲವಾರು ಜನರ ಸಮಸ್ಯೆಗಳು ಪರಿಹಾರವಾಗುತ್ತದೆ. ಈ ಕುರಿತು ಸಂಬಂಧಪಟ್ಟವರು ಗಮನ ಹರಿಸಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: