ಪ್ರಮುಖ ಸುದ್ದಿಮೈಸೂರು

ಆಹಾರ ಇಲಾಖೆ ಉಪ ನಿರ್ದೇಶಕ ಕಾ. ರಾಮೇಶ್ವರಪ್ಪ ಕರೆದಿದ್ದ ಅಧಿಕಾರಿಗಳ ಸಭೆಯನ್ನು ರದ್ದುಗೊಳಿಸಿದ ಜಿಲ್ಲಾಧಿಕಾರಿ ಅಭಿರಾಮ್

ಮೈಸೂರು,ಜು.21:- ಜಿಲ್ಲೆಯ ಆಹಾರ ಇಲಾಖೆ ಉಪ ನಿರ್ದೇಶಕ ಕಾ. ರಾಮೇಶ್ವರಪ್ಪ ಅವರು ಶನಿವಾರ ಕರೆದಿದ್ದ ಆಹಾರ ಇಲಾಖೆ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ರದ್ದು ಮಾಡಿದ ಘಟನೆ ನಡೆದಿದೆ.

ಅನ್ನ ಭಾಗ್ಯ ಯೋಜನೆಯ ಅಕ್ಕಿ ದುರುಪಯೋಗ ಹಗರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಆಹಾರ ಇಲಾಖೆಯ ಉಪನಿರ್ದೇಶಕ  ಕಾ. ರಾಮೇಶ್ವರಪ್ಪ ಅಮಾನತುಗೊಂಡಿದ್ದರು. ಮಂಡ್ಯ ಫುಡ್ ಡಿಡಿ ಕುಮುದ ಅವರನ್ನು ಮೈಸೂರಿನ ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಈ ನಡುವೆ ಸರಕಾರದ ಈ ಅಮಾನತು ಆದೇಶದ ವಿರುದ್ಧ ಕೆಎಟಿ ಮೊರೆ ಹೋಗಿದ್ದ ರಾಮೇಶ್ವರಪ್ಪ, ಶುಕ್ರವಾರ ಅಮಾನತು ಆದೇಶಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದರು. ಆದರೆ, ಈ ತಡೆಯಾಜ್ಞೆ ಆದೇಶವನ್ನು ಇಲಾಖೆ ಹಾಗೂ ಡಿಸಿ ಗಮನಕ್ಕೆ ತಾರದೆ ಅಧಿಕಾರ ಸ್ವೀಕರಿಸಿದ್ದರು ಎನ್ನಲಾಗಿದೆ.

ಸರ್ಕಾರದಿಂದ ಯಾವುದೇ ಹೊಸ ಆದೇಶ ಇಲ್ಲದಿದ್ದರೂ ಕಚೇರಿ ಪ್ರವೇಶಿಸಿ ಅಧಿಕಾರ ಸ್ವೀಕರಿಸಿದ ಆರೋಪ ಈಗ ರಾಮೇಶ್ವರಪ್ಪ ಅವರ ವಿರುದ್ಧ ಕೇಳಿ ಬಂದಿದೆ. ಜತೆಗೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ಇಂದು‌ ಬೆಳಿಗ್ಗೆ ಆಹಾರ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದು ಮತ್ತಷ್ಟು ವಿವಾದಕ್ಕೆ ಎಡೆಮಾಡಿದೆ. ಕಾ.ರಾಮೇಶ್ವರಪ್ಪ ಅಧಿಕಾರಿಗಳ ಸಭೆ ಕರೆದ ವಿಚಾರ ತಿಳಿಯುತ್ತಿದ್ದಂತೆ ಈ ಸಭೆಯನ್ನು ರದ್ದು ಪಡಿಸಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಆದೇಶ ಹೊರಡಿಸಿದ್ದಾರೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: