ಮೈಸೂರು

ಚಿಕಿತ್ಸೆಗೆಂದು ದಾಖಲಿಸಲಾದ ಒಂದೂವರೆ ವರ್ಷದ ಮಗು ಸಾವು : ಪೋಷಕರಿಂದ ವೈದ್ಯರ ವಿರುದ್ಧ ಆರೋಪ

ಮೈಸೂರು,ಜು.23:-  ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾದ ಒಂದೂವರೆ ವರ್ಷದ ಮಗು ಸಾವನ್ನಪ್ಪಿದ್ದು,ಪೋಷಕರು ಮತ್ತು ಆಸ್ಪತ್ರೆ ವೈದ್ಯರ ಜೊತೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಮೈಸೂರಿನ ಹೆಚ್ ಡಿ.ಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಒಂದೂವರೆ ವರ್ಷದ ಸುಭಾಗ್ ಹೆಸರಿನ ಗಂಡು ಮಗುವನ್ನು ಹೆಚ್.ಡಿ.ಕೋಟೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕೆಮ್ಮಿನಿಂದ ಬಳಲುತ್ತಿದ್ದ ಮಗುವನ್ನು ನಿನ್ನೆ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ‌ ಮಧ್ಯಾಹ್ನ ಏಕಾಏಕಿ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದು, ಸಂಜೆಯವರೆಗೂ ಆಸ್ಪತ್ರೆಯಲ್ಲಿ ಮಗು ಇಟ್ಟುಕೊಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡುವಾಗ ಎಡವಟ್ಟು ಮಾಡಿ ಸಾಯಿಸಿದ್ದಾರೆಂದು ಆರೋಪಿಸಿದ್ದು,ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಆಸ್ಪತ್ರೆ ವೈದ್ಯರು ಮೊದಲೇ ಮಾಹಿತಿ ನೀಡಿರುವುದಾಗಿ ಹೇಳಿದ್ದು, ಮಗುವಿಗೆ ಉಸಿರಾಟದ ತೊಂದರೆ ಇರುವುದಾಗಿ ವೈದ್ಯರು ಹೇಳಿದ್ದರು ಎನ್ನಲಾಗಿದೆ. ಮಗುವಿಗೆ ವೆಂಟಿಲೇಟರ್ ಅವಶ್ಯಕತೆ ಇದೆ. ಆದರೆ ವೆಂಟಿಲೇಟರ್ ಮೈಸೂರು ಆಸ್ಪತ್ರೆಯಲ್ಲಿದೆ. ದಾರಿ ಮಧ್ಯೆ ಸಾಯುವ ಸಾಧ್ಯತೆಗಳು ಇವೆ ಎಂದಿದ್ದರು. ಆದರೆ ಈ ಮಾತನ್ನು ಆಸ್ಪತ್ರೆಗೆ ಆಗಮಿಸುವ ಮುನ್ನವೇ ಹೇಳಬೇಕಿತ್ತು ಎಂದು ಪೋಷಕರು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ಮಾತಿನ ಚಕಮಕಿ ನಡೆಸಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ದೂರು ದಾಖಲಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: