ಮೈಸೂರು

ಜಿಲ್ಲಾ ಹಂತದಲ್ಲಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ -2018ಕ್ಕೆ ಚಾಲನೆ : ಗಾಂಧಿ ಜಯಂತಿಯಂದು ಕೇಂದ್ರ ಸರ್ಕಾರ ಪುರಸ್ಕಾರ ನೀಡಿ ಗೌರವಿಸಲಿದೆ :ಪಿ.ಶಿವಶಂಕರ್

ಮೈಸೂರು,ಜು.23:- ಗ್ರಾಮೀಣ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಭಾರತ್ ಮಿಷನ್ (ಗ್ರಾ)ಯೋಜನೆಯಡಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 ಜನಾಂದೋಲನ ಕಾರ್ಯಕ್ರಮಕ್ಕೆ ಜು.13ರಂದು ನವದೆಹಲಿಯಲ್ಲಿ ಚಾಲನೆ ನೀಡಿದ್ದು, ಬೃಹತ್ ಪ್ರಮಾಣದಲ್ಲಿ ನಾಗರೀಕರು ಸ್ವಚ್ಛ ಭಾರತ್ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶುಚಿತ್ವ ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸುವುದು ಸರ್ವೇಕ್ಷಣೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ತಿಳಿಸಿದರು.

ಈ ಕುರಿತು ಜಿಲ್ಲಾಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿಂದು ಮಾಹಿತಿ ನೀಡಿದ ಅವರು ಸಾರ್ವಜನಿಕ ಸ್ಥಳಗಳ ಸಮೀಕ್ಷೆ, ಸಮುದಾಯದಲ್ಲಿನ ಸ್ವಚ್ಛತೆಯ ದೃಷ್ಟಿಕೋನ, ಅವರ ಶಿಫಾರಸ್ಸುಗಳು ಮತ್ತು ಸ್ವಚ್ಛ ಭಾರತ್ ಮಿಷನ್ ಎಂ.ಐ ಎಸ್ ನಲ್ಲಿ ಜಿಯೋ ಬ್ಲಾಗ್ ಪೋಟೋ ಆರೋಹಿಸಿರುವುದು, ಒಡಿಎಫ್ ಗ್ರಾಮಗಳ ಘೋಷಣೆ ಮತ್ತು ಪರಿಶೀಲನೆ ಪಡೆದ ಪ್ರಗತಿ ವರದಿ ಹಾಗೂ ನೈರ್ಮಲ್ಯ ಸಮಗ್ರ ಶುಚಿತ್ವದ ನಿಯತಾಂಕ ಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆ ಮತ್ತು ರಾಜ್ಯಗಳಿಗೆ ಶ್ರೇಯಾಂಕ್ ಗಳನ್ನು ನೀಡಲಾಗುತ್ತದೆ. ಉತ್ತಮ ಶ್ರೇಣಿ ಪಡೆದ ರಾಜ್ಯ ಮತ್ತು ಜಿಲ್ಲೆಗಳಿಗೆ ಅಕ್ಟೋಬರ್ 2ರಂದು ನವದೆಹಲಿಯಲ್ಲಿ ನಡೆಯುವ ಗಾಂಧಿ ಜಯಂತಿಯಂದು ಕೇಂದ್ರ ಸರ್ಕಾರ ಪುರಸ್ಕಾರ ನೀಡಿ ಗೌರವಿಸಲಿದೆ ಎಂದರು. ದೇಶದಾದ್ಯಂತ 680 ಜಿಲ್ಲೆಗಳು, 6,980ಗ್ರಾಮಗಳು, 34,000ಸಾರ್ವಜನಿಕ ಸ್ಥಳಗಳು ಹಾಗೂ 50.00ಲಕ್ಷ ನಾಗರೀಕರ ಸಂದರ್ಶನ ಮತ್ತು ಅಭಿಪ್ರಾಯಗಳನ್ನು ಪಡೆಯುವುದು ಈ ಸರ್ವೇಕ್ಷಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ಕ್ಕೆ ಜು.13ರಂದು ಚಾಲನೆ ನೀಡಿದ್ದು, ರಾಜ್ಯ ಮಟ್ಟದಲ್ಲಿಯೂ ಕೂಡ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ -2018ಕ್ಕೆ ಚಾಲನೆ ನೀಡಬೇಕಿದೆ. ಅದೇ ರೀತಿ ಜಿಲ್ಲೆಯಲ್ಲಿಯೂ ಕೂಡ ಸರ್ವೇಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಗಿದ್ದು, ತಾಲೂಕು ಹಾಗೂ ಗ್ರಾಮಪಂಚಾಯತ್ ಗಳಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕಿದೆ. ಈ ಕಾರ್ಯಕ್ರಮದಲ್ಲಿ ಸಮೀಕ್ಷೆ/ಮೌಲ್ಯಮಾಪನ/ಶ್ರೇಣಿಯನ್ನು ನಿರ್ಧರಿಸಲಾಗಿದ್ದು, ಸ್ವಚ್ಛ ಭಾರತ್ ಮಿಷನ್(ಗ್ರಾ)ಯೋಜನೆಯ IMISನಲ್ಲಿಯ ಪ್ರಗತಿಯ ದತ್ತಾಂಶಗಳಿಗೆ ಶೇ.35ಅಂಕಗಳನ್ನು ನಿಗದಿಪಡಿಸಲಾಗಿದೆ. ನಾಗರೀಕರು ನೀಡುವ ಮಾಹಿತಿಯ ಆಧಾರದಲ್ಲಿ ಅಂಕಿಅಂಶಗಳ ಸಂಗ್ರಹಣೆಗೆ ಶೇ.35ಅಂಕಗಳು, ಶಾಲೆ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಂತೆ, ಬಸ್ ನಿಲ್ದಾಣ ಮತ್ತು ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳ ನೇರ ಪರಿವೀಕ್ಷಣೆಗೆ ಶೇ.30ರಷ್ಟು ಅಂಕಗಳನ್ನು ನಿಗದಿಪಡಿಸಿದೆ ಎಂದರು. ಸಮೀಕ್ಷೆಯಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ನೇಮಿಸಿರುವ ಖಾಸಗಿ ಸಂಸ್ಥೆಗಳು, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಪ್ರಾಯೋಜಕತ್ವದ ಸಂಸ್ಥೆಗಳು, ಮಾನದಂಡದಲ್ಲಿ ಸಾರ್ವಜನಿಕ ಸ್ಥಳಗಳ ಸಮೀಕ್ಷೆ, ಸ್ವಚ್ಛತೆಯ ಬಗ್ಗೆ ಜನರ ಗ್ರಹಿಕೆ, ಕಾರ್ಯಕ್ರಮ ಸುಧಾರಣೆಗೆ ಅವರ ಶಿಫಾರಸುಗಳು, ಸ್ವಚ್ಛ ಭಾರತ್ ಮಿಷನ್ ಯೋಜನೆಯ ದತ್ತಾಂಶಗಳು ಒಳಗೊಂಡಿದೆ ಎಂದರು. ಗ್ರಾಮ/ಗ್ರಾ.ಪಂಗಳಲ್ಲಿನ ಸಮಗ್ರ ಶುಚಿತ್ವ, ಸ್ವಚ್ಛತೆಯ ಕುರಿತು ಗುಣಾತ್ಮಕ ಮತ್ತು ಪರಿಣಾತ್ಮಕ ಮೌಲ್ಯಮಾಪನದ ಆಧಾರದ ಮೇಲೆ ಶ್ರೇಯಾಂಕಗಳನ್ನು ನೀಡಲಾಗುತ್ತದೆ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ನಿಯೋಜಿತ ಮೂರನೇ ಸ್ವಾಯತ್ತ ಸಂಸ್ಥೆಯಿಂದ ಆಗಸ್ಟ್ -2018ಮಾಹೆಯಲ್ಲಿ ಸಮೀಕ್ಷೆ ಆರಂಭಿಸುವುದಾಗಿ ಕೇಂದ್ರ ಸರ್ಕಾರವು ತಿಳಿಸಿದೆ. ಇದರ ಪೂರ್ವಭಾವಿಯಾಗಿ ನಾವಿಂದು ಜಿಲ್ಲೆಗಳಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಮಾಹಿತಿ ನೀಡಿದ್ದೇವೆ. ರಾಜ್ಯಮಟ್ಟದಲ್ಲಿಯೂ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018ಕ್ಕೆ ಚಾಲನೆ ನೀಡಬೇಕಿದೆ ಎಂದರು. ಜಿಲ್ಲಾ ಹಂತದಲ್ಲಿಯೂ ಸಹ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ -2018ಕ್ಕೆ ಚಾಲನೆ ನೀಡಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: