ದೇಶಪ್ರಮುಖ ಸುದ್ದಿ

ಬಿಜೆಪಿ ಆಹ್ವಾನಿಸಿದರೂ ಎನ್‌ಡಿಎ ಮೈತ್ರಿಕೂಟ ಸೇರುವುದಿಲ್ಲ: ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು

ಹೈದರಾಬಾದ್ (ಜುಲೈ 23): ಬಿಜೆಪಿ ಕಡೆಯಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರುವಂತೆ ಮನವಿ ಬಂದರೂ ಎನ್‍ಡಿಎ ಸೇರುವ ಪ್ರಶ್ನೆಯೇ ಇಲ್ಲ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಸ್ಪಷ್ಟಪಡಿಸಿದ್ದಾರೆ.

ತೆಲುಗುದೇಶಂ ಪಕ್ಷ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲು ಉಂಟಾಗಿದೆ. ಈ ಬೆಳವಣಿಗೆ ಬಳಿಕ ಎನ್.ಡಿ.ಎ ಮೈತ್ರಿಕೂಟ ಸೇರುವ ವಂದಂತಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ಮತ್ತೆ ಎನ.ಡಿ.ಎ ಮೈತ್ರಿಕೂಟ ಸೇರುವ ಇಂಗಿತವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನಮಗೆ ಅಧಿಕಾರದ ಹಸಿವಿಲ್ಲ, ಕೇಂದ್ರ ಸಚಿವ ಸ್ಥಾನದ ಹುದ್ದೆಯ ಆಸೆಯೂ ಇಲ್ಲ. 2014ರಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಟಿಡಿಪಿ ಸೇರಿದ್ದು ರಾಜ್ಯದ ಜನರ ಹಿತಕ್ಕಾಗಿ ಎಂದು ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.

2014ರಲ್ಲಿ ನಾವು ಎನ್‌ಡಿಎ ಮೈತ್ರಿಕೂಟ ಸೇರಿದ್ದು, ಆಂಧ್ರಪ್ರದೇಶ ರಾಜ್ಯದ ಹಿತಕ್ಕಾಗಿ. ನಾವು 4 ವರ್ಷ ಬಿಜೆಪಿ ಸರ್ಕಾರ ರಾಜ್ಯಕ್ಕೆ ನ್ಯಾಯ ಒದಗಿಸಲಿದೆ ಎಂದು ಕಾದೆವು. ಆದರೆ, ರಾಜ್ಯದ ಜನರಿಗೆ ಅವರು ದ್ರೋಹ ಮಾಡಿದ್ದಾರೆ. ಇನ್ನೊಮ್ಮೆ ಅವರು ದ್ರೋಹ ಮಾಡುವುದಿಲ್ಲ ಎಂದು ನಾವು ನಂಬುವುದು ಹೇಗೆ? ಎಂದು ಎನ್.ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದಾರೆ.

ಬದ್ಧತೆ ಮತ್ತು ಸಂಖ್ಯಾಬಲದ ನಡುವಿನ ಹೋರಾಟ:

ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಅವರು ಕೇಂದ್ರ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. ಲೋಕಸಭೆಯಲ್ಲಿ ಮಂಡನೆಯಾದ ಅವಿಶ್ವಾಸ ನಿರ್ಣಯ ನಮ್ಮ ಬದ್ಧತೆ ಮತ್ತು ಬಿಜೆಪಿಯ ಸಂಖ್ಯಾಬಲದ ನಡುವಿನ ಹೋರಾಟವಾಗಿತ್ತು ಎಂದು ಎನ್.ಚಂದ್ರಬಾಬು ನಾಯ್ಡು ಇದೇ ವೇಳೆ ಹೇಳಿದ್ದಾರೆ.

ನವೀನ್ ಪಟ್ನಾಯಕ್ ಜೊತೆ ಮಾತುಕತೆ:

ಬಿಜೆಡಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಮತದಾನ ಮಾಡದೇ ಸಂಸತ್‌ನಿಂದ ಹೊರ ಹೋಯಿತು. ನವೀನ್ ಪಟ್ನಾಯಕ್ ನಮ್ಮ ಹಳೆಯ ಮಿತ್ರರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಿತ್ರಪಕ್ಷಗಳನ್ನುಒಗ್ಗೂಡಿಸಲಾಗತ್ತದೆ. ಬಿಜೆಪಿಯವರು ಆಂಧ್ರಪ್ರದೇಶಕ್ಕೆ ಯಾವುದೇ ಕೊಡುಗೆ ನೀಡುತ್ತೇವೆ ಎಂದು ಹೇಳಿದರೂ ಎನ್‌ಡಿಎ ಮೈತ್ರಿಕೂಟವನ್ನು ಸೇರುವುದಿಲ್ಲ ಎಂದು ಎನ್.ಚಂದ್ರಬಾಬು ನಾಯ್ಡು ಹೇಳಿದರು.

ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ:

ಇದೇ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ ಚಂದ್ರಬಾಬು ನಾಯ್ಡು ಅವರು, ನಮ್ಮ ರಾಜ್ಯಕ್ಕೆ ವಿಶೇಶ ಸ್ಥಾನಮಾನ ನಿರಾಕರಿಸಿದ್ದಾರೆ. ಆದರೆ, ಬೇರೆ ಈಶಾನ್ಯ ರಾಜ್ಯಗಳಿಗೆ ನೀಡಲಾಗಿದೆ ಎಂದು ನಾಯ್ಡು ದೂರಿದರು. (ಎನ್.ಬಿ)

Leave a Reply

comments

Related Articles

error: