ಕ್ರೀಡೆಮೈಸೂರು

ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮೈಸೂರು ವಾರಿಯರ್ಸ್ ತಂಡದ ಮೆಂಟರ್

ಮೈಸೂರು,ಜು.23-ಮೈಸೂರು ವಾರಿಯರ್ಸ್ ತಂಡದ ಪ್ರಾಂಚೈಸ್ ಆಗಿರುವ ಎನ್.ಆರ್.ಸಮೂಹದ ಸೈಕಲ್ ಫ್ಯೂರ್ ಅಗರಬತ್ತೀಸ್ ಕೆಪಿಎಲ್ 7ನೇ ಆವೃತ್ತಿಗೆ ವಾರಿಯರ್ಸ್ ತಂಡಕ್ಕೆ ಮೆಂಟರ್ ಆಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರನ್ನು ನೇಮಕ ಮಾಡಿಕೊಂಡಿದೆ.

1996ರಲ್ಲಿ ಕ್ರಿಕೆಟ್ ಲೋಕಕ್ಕೆ ಪರಿಚಿತರಾದ ಮಾಜಿ ವೇಗಿ ವೆಂಕಟೇಶ್, ಬಲಗೈ ಮಧ್ಯಮ ವೇಗದ ಬೌಲರ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು 2007-2009ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್‍ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಬೌಲಿಂಗ್ ತರಬೇತುದಾರರಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ವೆಂಕಟೇಶ್ ಪ್ರಸಾದ್, ಕೆಪಿಎಲ್ 2018ರಲ್ಲಿ ಮೈಸೂರು ವಾರಿಯರ್ಸ್‍ ತಂಡದ ಮೆಂಟರ್ ಆಗಿ ಕೆಲಸ ಮಾಡಲು ನನಗೆ ಹೆಮ್ಮೆ ಎನಿಸುತ್ತಿದೆ. ಈ ತಂಡವು ಸಮರ್ಥ, ಅನುಭವಿ ಮತ್ತು ಉದಯೋನ್ಮುಖ ಆಟಗಾರರನ್ನು ಒಳಗೊಂಡಿದೆ. ಈ ತಂಡದ ಪ್ರತಿಯೊಬ್ಬ ಆಟಗಾರರಲ್ಲಿಯೂ ಅವರದೇ ಆದ ವಿಶೇಷ ಕೈಚಳಕವಿದೆ. ಅದನ್ನು ಅವರಿಗೆ ಮನದಟ್ಟು ಮಾಡಿಕೊಡುವ ಮೂಲಕ ಅವರ ಸಾಮರ್ಥ್ಯವನ್ನು ಹೊರ ಹಾಕಲು ಮತ್ತು ಪೂರ್ಣ ಪ್ರಮಾಣದಲ್ಲಿ ಅದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಲು ನಾನು ಅವರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತೇನೆ. ಈ 7ನೇ ಆವೃತ್ತಿಯನ್ನು ರೋಮಾಂಚಕಾರಿ ಪಂದ್ಯವನ್ನಾಗಿ ಮಾಡಲು ನಾವೆಲ್ಲ ಶ್ರಮಿಸಲಿದ್ದೇವೆ ಎಂದಿದ್ದಾರೆ.

ಮೈಸೂರು ವಾರಿಯರ್ಸ್‍ನ ಮಾಲೀಕರೂ ಹಾಗೂ ಸೈಕಲ್ ಪ್ಯೂರ್‍ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಅರ್ಜುನ್‍ರಂಗ ಮಾತನಾಡಿ, ಮೈಸೂರು ವಾರಿಯರ್ಸ್‍ ಕುಟುಂಬದ ಮೆಂಟರ್ ಆಗಿ ವೆಂಕಟೇಶ್ ಪ್ರಸಾದ್‍ ಅವರನ್ನು ಸ್ವಾಗತಿಸುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ವೆಂಕಟೇಶ್, ತಂಡವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎನ್ನುವ ಭರವಸೆಯಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಪಡೆಯಲು ನಮ್ಮ ಆಟಗಾರರಿಗೆ ಇವರಿಂದ ಸಹಾಯವಾಗಲಿದೆ. ವೆಂಕಟೇಶ್‍ ಅವರಿಗೆ ನಮ್ಮ ತಂಡದ ಪರವಾಗಿ ಸ್ವಾಗತ ಕೋರುತ್ತೇವೆ. ಮುಂಬರುವ ಪಂದ್ಯಗಳಲ್ಲಿ ಮೈಸೂರು ವಾರಿಯರ್ಸ್ ಹೊಸ ದಿಸೆ ಪಡೆಯಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ 7ನೇ ಆವೃತ್ತಿಯ ಕೆಪಿಎಲ್ ಪಂದ್ಯಾವಳಿಗಳು ಆ.15 ರಿಂದ ಪ್ರಾರಂಭವಾಗಲಿದೆ. ಪಂದ್ಯಾವಳಿ ಮೈಸೂರು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ನಡೆಯಲಿದೆ. (ಎಂ.ಎನ್)

 

Leave a Reply

comments

Related Articles

error: