ಪ್ರಮುಖ ಸುದ್ದಿ

ಪತಂಜಲಿ ಕಂಪನಿ ಹೆಸರೇಳಿ ಕಬ್ಬಿಣದಂಗಡಿ ಮಾಲೀಕನಿಗೆ ಮೋಸ

ರಾಜ್ಯ(ಬೆಂಗಳೂರು)ಜು.23:- ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಅಥವಾ ಸಚಿವ, ಶಾಸಕರ ಆಪ್ತನೆಂದು ಜನರನ್ನು ನಂಬಿಸಿ ವಂಚಿಸಿರುವ ಘಟನೆಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಪ್ರತಿಷ್ಠಿತ ಬಾಬಾರಾಮ್ ದೇವ್‌ರ ಪತಂಜಲಿ ಕಂಪನಿ ಹೆಸರೇಳಿ ಮಕ್ಮಲ್ ಟೋಪಿ ಹಾಕಿದ್ದಾನೆ.

ನಾನು ಪತಂಜಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಪತಂಜಲಿ ಸಂಸ್ಥೆಗೆ ಸಂಬಂಧಪಟ್ಟಂತೆ ಗೋದಾಮು ನಿರ್ಮಾಣ ಮಾಡಬೇಕಾಗಿದೆ, ಹೀಗಾಗಿ ನಿಮ್ಮಲ್ಲಿ ನಾನು ಕಟ್ಟಡ ನಿರ್ಮಾಣ ಮಾಡಲು ಕಬ್ಬಿಣದ ಸರಳುಗಳನ್ನ ಕೊಂಡುಕೊಳ್ಳಲು ಬಂದಿದ್ದೇನೆ. ಹೀಗೆ ಬಣ್ಣದ ಬಣ್ಣದ ಮಾತುಗಳನ್ನಾಡಿ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿನ ಮಾರುತಿ ಟ್ರೇಡರ್ಸ್, ಅಂಗಡಿಯಲ್ಲಿ ಬರೋಬ್ಬರಿ 5 ಲಕ್ಷ ಮೌಲ್ಯದ ವಸ್ತುಗಳನ್ನು ಖರಿದೀಸಿದ್ದಾನೆ. ಬಳಿಕ ಹಣದ ಬದಲಾಗಿ ಚೆಕ್ ನೀಡಿದ್ದಾನೆ. ಆ ಚೆಕ್ ನ್ನು ಬ್ಯಾಂಕ್ ಹಾಕಿದಾಗ ನಕಲಿ ಎಂದು ಗೊತ್ತಾಗಿದೆ. ಇದೀಗ ಹಣವೂ ಇಲ್ಲ ವ್ಯಾಪಾರವೂ ಇಲ್ಲದೆ ಅಂಗಡಿ ಮಾಲೀಕ ಕಂಗಾಲಾಗಿದ್ದಾರೆ. ವಂಚನೆಗೊಳಗಾದ ಬೆಟ್ಟಸ್ವಾಮಿಗೌಡರು ಹೇಳುವಂತೆ, ವಂಚಕ ಅಂಗಡಿಗೆ ಬಂದಾಗ, ಸ್ವಾಮೀಜಿ ಅಂತೆಯೇ ಉದ್ದನೆಯ ಕುಂಕುಮ ಇಟ್ಟುಕೊಂಡು ಸ್ವಾಮೀಜಿಯಂತೆಯೇ ಕಾಣುತ್ತಿದ್ದ. ನಾನು ಬ್ರಾಹ್ಮಣ ಅಂತಲೂ ಹೇಳಿದ. ಬ್ರಾಹ್ಮಣರು ಯಾರೂ ಮೋಸ ಮಾಡುವುದಿಲ್ಲ ಎಂದು ನಾನು ವ್ಯಾಪಾರ ಮಾಡಿದೆ. ಆದರೆ ಆತ ಕೊಟ್ಟ ಚೆಕ್ ನ್ನು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿದಾಗಲೇ ನಕಲಿ ಎಂದು ತಿಳಿಯಿತು. ಈಗ ಆತನೂ ಸಿಗುತ್ತಿಲ್ಲ. ಆತ ಹೇಳಿದ ವಿಳಾಸದಲ್ಲಿ ಯಾವುದೇ ಗೋದಾಮು ಇಲ್ಲವೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಘಟನೆ ಸಂಬಂಧ ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ನಯವಂಚಕ ಮತ್ತೊಬ್ಬರಿಗೆ ಇದೇ ರೀತಿ ವಂಚಿಸುವ ಮುನ್ನ ಆತನನ್ನು ಹಿಡಿದು ಈತನಿಂದ ಮೋಸ ಹೋದವರಿಗೆ ನ್ಯಾಯ ಒದಗಿಸಿ ಬಳಿಕ ಕಂಬಿ ಹಿಂದೆ ಕಳಿಸಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: