ಮೈಸೂರು

ಕೃಷ್ಣರಾಜ ಕ್ಷೇತ್ರದ 61ನೇ ವಾರ್ಡ್ ಗೆ ಶಾಸಕ ರಾಮದಾಸ್ ಭೇಟಿ : ರಸ್ತೆ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಆದೇಶ

ಮೈಸೂರು,ಜು.23-ಶಾಸಕ ಎಸ್.ಎಸ್.ರಾಮದಾಸ್ ಅವರು ಸೋಮವಾರ ಕೃಷ್ಣರಾಜ ಕ್ಷೇತ್ರದ ಹಿಂದಿನ 11ನೇ ವಾರ್ಡ್ ಆಗಿದ್ದ ಈಗ 61ನೇ ವಾರ್ಡ್ ಆಗಿರುವ ಕ್ಷೇತ್ರಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಧರಂಸಿಂಗ್ ಕಾಲೋನಿಯಲ್ಲಿ ಇರುವ ಪೌರಕಾರ್ಮಿಕರ ಬಡಾವಣೆಯಲ್ಲಿ ಸಾರ್ವಜನಿಕರು ಕಳೆದ 5 ವರ್ಷಗಳಲ್ಲಿ ಯಾವುದೇ ಕಾಮಗಾರಿ ಆಗಿಲ್ಲವೆಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮದಾಸ್, ಸ್ಲಂ ಬೋರ್ಡ್ ನ ಅಡಿಯಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಆದೇಶಿಸಿದರು.

ನರ್ಮ್ ಯೋಜನೆಯಲ್ಲಿ ಮೂರು ವರ್ಷಗಳ ಹಿಂದೆ ಕಟ್ಟಿದ್ದ ಮನೆಗಳ ಛಾವಣಿಯಲ್ಲಿ ನೀರು ಸೋರುತ್ತಿರುವ ಬಗ್ಗೆ ದೂರು ಕೇಳಿಬಂದ ಹಿನ್ನಲೆಯಲ್ಲಿ ಆ ಮನೆಗಳಿಗೆ ಭೇಟಿ ನೀಡಿದ ಶಾಸಕರು ಕಳಪೆ ಕಾಮಗಾರಿ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಛಾವಣಿ ಸೋರದಂತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.

ವಿದ್ಯಾರಣ್ಯ ಪುರಂ 30  ನೇ ಕ್ರಾಸ್ ನಲ್ಲಿರುವ ಗುಡಿಸಲುಗಳನ್ನು ತೆರವುಗೊಳಿಸಿ ಮನೆಗಳನ್ನು ಕಟ್ಟುವ ದೃಷ್ಟಿಯಿಂದ ಹಿಂದೆ ಸ್ಲಂ ಬೋರ್ಡ್ ನಲ್ಲಿ ಆಗಿದ್ದಂತಹ ತಕರಾರಿನ ಬಗ್ಗೆ ಸಾರ್ವಜನಿಕರು ಅಹವಾಲು ನೀಡಿದರು. ಇಲ್ಲಿರುವ ತೊಂದರೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಒಳ ಚರಂಡಿಗೆ ಮತ್ತು ರಸ್ತೆಗೆ ಕೆಲಸಗಳ ಬಗ್ಗೆ ಒಂದು ನಕ್ಷೆಯನ್ನು  ತಯಾರಿಸಲು ತಿಳಿಸಿದರಲ್ಲದೆ ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಫಲಾನುಭವಿಗಳೇ ಇಚ್ಛೆ ಪಟ್ಟಲ್ಲಿ ಅವರೇ ಮನೆಗಳನ್ನು ನಿರ್ಮಿಸಲು ಅವಕಾಶ ಮಾಡಲು ಅಥವಾ ಸರ್ಕಾರವೇ ಕಟ್ಟುವ ಅವಕಾಶ ದೊರಕಿಸಿಕೊಡುವ ನಿರ್ಣಯವನ್ನು ಪಡೆದರು. ಇನ್ನು 15 ದಿನಗಳಲ್ಲಿ ಮನೆ ಕಟ್ಟುವ ಕೆಲಸ ಪ್ರಾರಂಭಿಸಲು ಸೂಚನೆ ನೀಡಿದರು.

ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಾಮಗಾರಿ ಪ್ರಾರಂಭವಾಗಿದ್ದು, ಈ ಜಾಗಗಳು ನಗರ ಪಾಲಿಕೆಗೆ ಸೇರಿದ್ದ, ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದೋ ಅನ್ನುವ ಮಾಹಿತಿ ಇಲ್ಲದೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ವಿಷಯ ಬೆಳಕಿಗೆ ಬಂದಿದ್ದು, ಈ ವಿಷಯವಾಗಿ ಶಾಸಕರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿ, ಅಭಿವೃದ್ಧಿ ಪ್ರಾಧಿಕಾರ, ರೆವೆನ್ಯೂ ಇಲಾಖೆ ಒಳಗೊಂಡಂತೆ ಎಲ್ಲೆಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿದೆಯೋ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಇಂದು ಸಂಜೆಯೇ ಸಭೆಯನ್ನು ಕರೆದು ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ರಸ್ತೆ ಕಾಮಗಾರಿಗೆ ರಾಮದಾಸ್ ಚಾಲನೆ ನೀಡಿದರು. (ಎಂ.ಎನ್)

Leave a Reply

comments

Related Articles

error: