ಪ್ರಮುಖ ಸುದ್ದಿ

ಹೊಗೇನಕಲ್ ಜಲಪಾತ ವೀಕ್ಷಣೆಗೆ ನಿಷೇಧ

ರಾಜ್ಯ(ಚಾಮರಾಜನಗರ)ಜು.23:- ಭಾರೀ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿರುವ ಕಾರಣ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಹೊಗೇನಕಲ್ ಜಲಪಾತಕ್ಕೆ ನಿಷೇಧ ಹೇರಲಾಗಿದೆ.

ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯಗಳು ತುಂಬಿವೆ. ಆದ್ದರಿಂದ ಕೆಆರ್‍ಎಸ್ ಮತ್ತು ಕಬಿನಿಯಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಯು ಅಪಾಯಮಟ್ಟ ಹರಿಯುತ್ತಿರುವುದರಿಂದ ಕೊಳ್ಳೆಗಾಲದ ಸಮೀಪವಿರುವ ಹೊಗೇನಕಲ್ ಜಲಪಾತಕ್ಕೆ ಪ್ರವಾಸಿಗರ ವೀಕ್ಷಣೆಗೆ ನಿಷೇಧ ಹೇರಲಾಗಿದೆ.

ಹೊಗೇನಕಲ್ ಜಲಪಾತ ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವೇಶವನ್ನು ನಿರಾಕರಿಸಲಾಗಿದೆ. ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯದಿಂದ ನೀರಿನ ಹೊರ ಹರಿವು ಕಡಿಮೆಯಾಗುವವರೆಗೂ ಪ್ರವಾಸಿಗರಿಗೆ ನಿಷೇಧ ಮುಂದುವರಿಯಲಿದೆ.

ಸದ್ಯ ಹೊಗೇನಕಲ್ ಸಂಪೂರ್ಣ ಜಲಾವೃತಗೊಂಡಿದ್ದು, ಅಕ್ಕ-ಪಕ್ಕದ ಮನೆಗಳು ಸಹ ನೀರಿನಿಂದ ಮುಳುಗಡೆಯಾಗಿದೆ. ಈ ಮೊದಲು ಬೆಂಗಳೂರು ಮೂಲಕ ಇಬ್ಬರು ಟೆಕ್ಕಿಗಳು ಹೊಗೆನಕಲ್ ನಲ್ಲಿ ಕೊಚ್ಚಿ ಹೋಗಿ ತಮ್ಮ ಪ್ರಾಣಕಳೆದುಕೊಂಡಿದ್ದರು.

ಹೊಗೇನಕಲ್ ಜಲಪಾತ ವೀಕ್ಷಣೆಗೆ ನದಿ ಮಧ್ಯ ಭಾಗಕ್ಕೆ ಹೋಗಲು ನಿರ್ಮಿಸಲಾಗಿರುವ ಸೇತುವೆ ಮುಳುಗಡೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಹೊಗೇನಕಲ್ ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.

ಕೆಆರ್ ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಒಂದು ಲಕ್ಷ ಕ್ಯೂಸೆಕ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಕಾವೇರಿ ನದಿ ಕರ್ನಾಟಕ ಗಡಿಯಿಂದ ತಮಿಳುನಾಡು ಗಡಿ ಪ್ರವೇಶಿಸುವ ಜಿಲ್ಲೆಯ ಹೊಗೇನಕಲ್ ನಲ್ಲಿ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ಸೇತುವೆ ಮುಳುಗಡೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: