ಪ್ರಮುಖ ಸುದ್ದಿ

ಬೆಂಗಳೂರು-ಮೈಸೂರು 6 ಪಥಗಳ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿವೆ : ಸಚಿವ ಹೆಚ್.ಡಿ. ರೇವಣ್ಣ

ರಾಜ್ಯ(ಬೆಂಗಳೂರು),ಜು. 24 :- ಬೆಂಗಳೂರು-ಮೈಸೂರು 6 ಪಥಗಳ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿವೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.

ಬೆಂಗಳೂರು-ಮೈಸೂರು ನಡುವಿನ 6 ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೂ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗಳು ನಡೆದಿದ್ದು, ಶೇ. 63 ರಷ್ಟು ಭೂಸ್ವಾಧೀನ ಮುಗಿದಿದೆ. ಇನ್ನು 12 ದಿನಗಳಲ್ಲಿ ಭೂಸ್ವಾಧೀನ ಪೂರ್ಣಗೊಂಡ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ತಮ್ಮ ಕೆಲಸವನ್ನು ಆರಂಭಿಸಲಿದ್ದಾರೆ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು. ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿ ನಿರ್ಮಾಣ 2 ಪ್ಯಾಕೇಜ್‌ಗಳಲ್ಲಿ ನಡೆಯಲಿದ್ದು, 2 ವರ್ಷಗಳಲ್ಲಿ ಕಾಮಗಾರಿಗಳು ಪೂರ್ಣವಾಗಲಿವೆ ಎಂದರು.

ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರದ ಭೂಸಾರಿಗೆ ಸಚಿವರನ್ನು ಭೇಟಿ ಮಾಡಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗಳನ್ನು ಚುರುಕುಗೊಳಿಸುವ ಸಂಬಂಧ ಚರ್ಚೆ ನಡೆಸಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದಿಂದ ಆಗಬೇಕಿರುವ ಕೆಲಸಗಳ ಬಗ್ಗೆ ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸಿ ಕಾಮಗಾರಿಗಳ ಅನುಷ್ಠಾನದತ್ತ ಗಮನಹರಿಸಿ ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದರು. ತುಮಕೂರು-ಶಿವಮೊಗ್ಗ, ಬೆಳಗಾವಿ-ಖಾನಾಪುರದಿಂದ ಗೋವಾ ಗಡಿಯವರೆಗೆ, ಶಿರಸಿಯಿಂದ ಕುಮಟ ಹೀಗೆ ರಾಜ್ಯದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕಾಗಿ ಒಟ್ಟು 37 ಸಾವಿರ ಕೋಟಿ ರೂ.ಗಳನ್ನು ಒದಗಿಸಲು ಕೇಂದ್ರ ಭೂ ಸಾರಿಗೆ ಸಚಿವರು ಒಪ್ಪಿಗೆ ನೀಡಿದ್ದಾರೆ. ಎಲ್ಲ ಕಾಮಗಾರಿಗಳು ಅತಿ ಶೀಘ್ರದಲ್ಲೇ ಆರಂಭವಾಗಲಿವೆ ಎಂದರು. ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆ ನಿರ್ಮಾಣಕ್ಕೂ 500 ಕೋಟಿ ರೂ. ಒದಗಿಸಲಾಗಿದೆ ಎಂದು ಹೇಳಿದರು.

ಕಿರು ಸೇತುವೆ

ಮಳೆಗಾಲದಲ್ಲಿ ಮಲೆನಾಡು ಪ್ರದೇಶ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಾಲುಸಂಕಗಳ ಮೇಲೆ ಜನ ಹೊಳೆ ದಾಟಿ ಹೋಗಬೇಕಾದ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇಲ್ಲೆಲ್ಲಾ ಕಿರು ಸೇತುವೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು. ರಾಜ್ಯದ ಎಲ್ಲೆಲ್ಲ ಕಾಲುಸಂಕಗಳು ಇರುವ ಕಡೆ ಕಿರುಸೇತುವೆ ನಿರ್ಮಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಮಳೆಯಿಂದ ಮಲೆನಾಡು ಭಾಗದಲ್ಲಿ ರಸ್ತೆಗಳು ಹಾಳಾಗಿರುವುದು ಸರ್ಕಾರಕ್ಕೆ ಗಮನಕ್ಕೆ ಬಂದಿದೆ. ಮಲೆನಾಡು ಮತ್ತು ಕರಾವಳಿ ಭಾಗದ 32 ಕ್ಷೇತ್ರದಲ್ಲಿ ರಸ್ತೆ ದುರಸ್ತಿ ಮತ್ತು ಅಭಿವೃದ್ಧಿಗೆ ಹಣ ಒದಗಿಸಲಾಗುವುದು ಎಂದು ಹೇಳಿದರು. ಕೊಡಗು ಜಿಲ್ಲೆಯ ರಸ್ತೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ 100 ಕೋಟಿ ರೂ.ಗಳ ಪ್ಯಾಕೇಜ್ ಸಿದ್ದಪಡಿಸಲಾಗಿದೆ. ಅದೇ ರೀತಿ ಮಂಗಳೂರು-ಕರಾವಳಿ ಜಿಲ್ಲೆಗಳಿಗೂ ರಸ್ತೆ ಅಭಿವೃದ್ಧಿ ಪ್ಯಾಕೇಜ್‌ಗಳನ್ನು ಶಾಸಕರ ಜತೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಸೇವಾ ತೆರಿಗೆ ಕಡಿತ

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೇವಾ ತೆರಿಗೆಯನ್ನು 12.5 ರಿಂದ 2.5ಕ್ಕೆ ಕಡಿತ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು. ನಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ನವೀಕರಣ ಮಾಡುತ್ತಿಲ್ಲ. ಬಣ್ಣ ಹೊಡೆಯಲಾಗಿದೆ ಅಷ್ಟೆ. ಹಿಂದೆ ಸಚಿವರಾಗಿದ್ದ ಮಹದೇವಪ್ಪನವರೇ ನವೀಕರಣ ಮಾಡಿದ್ದರು. ನವೀಕರಣ ಮಾಡಲಾಗುತ್ತಿದೆ ಎಂಬ ವರದಿಗಳು ನಿರಾಧಾರ ಎಂದು ಸ್ಪಷ್ಟಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: