ಮೈಸೂರು

ಮೈಸೂರು ನಗರವನ್ನು ತಂಬಾಕು ಮುಕ್ತವಾಗಿಸಲು ಪೊಲೀಸರಿಗೆ ವಿಶೇಷ ತರಬೇತಿ ಕಾರ್ಯಾಗಾರ

ಮೈಸೂರು,ಜು.24:- ತಂಬಾಕು ನಿಯಂತ್ರಣ ಕಾಯ್ದೆಯ ಅನುಷ್ಠಾನದಲ್ಲಿ ಮೈಸೂರ ನಗರವನ್ನು ಅತ್ಯುತ್ತಮ ನಗರವನ್ನಾಗಿಸುವ ನಿಟ್ಟಿನಲ್ಲಿ, ನಿನ್ನೆ ಮೈಸೂರು ನಗರ ಪೊಲೀಸ್ ಅಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ತಾವು ಕಾರ್ಯನಿರ್ವಹಿಸುತ್ತಿರುವ ಠಾಣಾ ವ್ಯಾಪ್ತಿಯಲ್ಲಿ ಕೋಟ್ಪಾ-2003 (ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ) ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ನಗರ ಉಪ ಪೊಲೀಸ್ ಆಯುಕ್ತ ಡಾ. ವಿಕ್ರಂ ವಿ ಅಮಟೆ ಇತ್ತೀಚಿನ ದಿನಗಳಲ್ಲಿ ಯುವಜನತೆ ತಂಬಾಕು ಚಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿದ್ದಾರೆ, ಅದರಲ್ಲೂ ಶಾಲಾ ಕಾಲೇಜುಗಳ ಮುಂದೆ ಅಕ್ರಮ ಮಾರಾಟ ಹೆಚ್ಚುತ್ತಿದ್ದು ಇವುಗಳ ಮೇಲೆ ಕಡಿವಾಣ ಹಾಕುವುದು ಅತ್ಯವಶ್ಯಕವಾಗಿದೆ. ಈ ಸಂಬಂಧ ನಗರದಲ್ಲಿ ಈಗಾಗಲೇ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ನಗರವನ್ನು ಸದ್ಯದಲ್ಲೇ ಅತ್ಯುತ್ತಮ ಕೋಟ್ಪಾ ಕಾಯ್ದೆ ಅನುಷ್ಠಾನಿತ ನಗರವನ್ನಾಗಿಸುವ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಯ್ದೆಯ ಸಮರ್ಪಕ ಜಾರಿಗೆ ಶ್ರಮವಹಿಸಬೇಕೆಂದು ಆ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪೊಲೀಸರು ತಮ್ಮ ಸಾಮಾಜಿಕ ಬದ್ಧತೆ ತೋರಬೇಕೆಂದು ತಿಳಿಸಿದರು. ಕೋಟ್ಪಾ ಕಾಯ್ದೆಯಲ್ಲಿನ ಪ್ರಮುಖ ನಿಯಮಗಳ ಮಹತ್ವ ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಪೊಲೀಸರಿಗೆ ಅರಿವು ಮೂಡಿಸುವ ಉದ್ದೇಶ ಈ ಕಾರ್ಯಾಗಾರದ್ದಾಗಿದೆ” ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟದ ಸಂಚಾಲಕ ಚಂದರ್ ಹಾಗು ಜಾನ್ ಕೆನಡಿ ಅವರು ಕೋಟ್ಪಾ ಕಾಯ್ದೆಯ ಬಗ್ಗೆ ಹಾಗೂ ತಂಬಾಕಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಯಾರಿಸಲಾದ ವಿಶೇಷ ದೃಶ್ಯ-ಶ್ರಾವ್ಯ ಪ್ರಾತ್ಯಕ್ಷಿಕೆಯ ಮೂಲಕ ಕಾರ್ಯಾಗಾರದಲ್ಲಿ ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ನಗರವನ್ನು ‘ತಂಬಾಕುಮುಕ್ತ ನಗರ’ವನ್ನಾಗಿಸುವ ನಿಟ್ಟಿನಲ್ಲಿ ರೂಪಿಸಿರುವ ಯೋಜನೆಯ ವಿವರವನ್ನು ನೀಡಿದರು. ಕೋಟ್ಪಾ ಕಾಯ್ದೆಯ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಾಗಿರುತ್ತದೆ. ಉಲ್ಲಂಘನೆ ಕಂಡುಬಂದಲ್ಲಿ ರೂ.200ರ ವರೆಗೂ ದಂಡ ಹಾಕಲಾಗುವುದು.ಎಲ್ಲಾ ವಿಧದ ತಂಬಾಕು ಉತ್ಪನ್ನಗಳ ಜಾಹೀರಾತುಗಳು ಕಾನೂನುಬಾಹಿರವಾಗಿದ್ದು, ಈ ಜಾಹೀರಾತುಗಳ ಪ್ರದರ್ಶಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶಾಲಾ ಕಾಲೇಜುಗಳ ಆವರಣದ 100 ಗಜಗಳ ಸುತ್ತಮುತ್ತಲ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗು ಸೇವನೆ ಕಾನೂನು ಬಾಹಿರವಾಗಿದ್ದು, ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಅಂಗಡಿಗಳನ್ನು ತೆರವುಗೊಳಿಸಿ ಮಾಲೀಕರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.ಶಾಸನ ವಿಧಿಸಿದ ಚಿತ್ರ ಸಹಿತ ಎಚ್ಚರಿಕೆ ಮುದ್ರಣ ಮಾಡಿರದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಿ ಕ್ರಮ ಕೈಗೊಳ್ಳಲಾಗುವುದು.ಇವುಗಳ ಉಲ್ಲಂಘನೆ ವಿರುದ್ಧ  ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಂಬಾಕು ನಿಯಂತ್ರಣದ ಅಗತ್ಯವೇನು?

ತಂಬಾಕು. ಇದು ಕೋಟ್ಯಂತರ ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ಮಾರಕ ತಂಬಾಕು ಸೇವನೆಯಿಂದಾಗಿ ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇತ್ತೀಚಿನ ಸಂಶೋಧನೆಗಳ ಪ್ರಕಾರ ದೇಶದಲ್ಲಿ ಪ್ರತಿ ಎಂಟು ಸೆಕೆಂಡಿಗೆ ಒಬ್ಬರು ತಂಬಾಕು ಸೇವನೆ ಮಾಡುವವರು ಕೊನೆಯುಸಿರೆಳೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಶೇ. 40 ರಷ್ಟು ಪುರುಷರು ಮತ್ತು ಶೇ.16 ರಷ್ಟು ಮಹಿಳೆಯರು ತಂಬಾಕು ಉತ್ಪನ್ನಗಳ ದಾಸರಾಗಿದ್ದಾರೆ. ಇದರ ಪರಿಣಾಮ ಕ್ಯಾನ್ಸರ್, ಹೃದ್ರೋಗ, ಶ್ವಾಸಕೋಶ ತೊಂದರೆ ಸೇರಿದಂತೆ ಮತ್ತಿತರೆ ಮಾರಣಾಂತಿಕ ರೋಗಗಳಿಗೆ ಲಕ್ಷಾಂತರ ಜನ ತುತ್ತಾಗುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ತಂಬಾಕು ಮುಕ್ತ ಕರ್ನಾಟಕ ಒಕ್ಕೂಟದ ಸಹಯೋಗದೊಂದಿಗೆ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.

ಈ ಕಾರ್ಯಾಗಾರದಲ್ಲಿ ಮೈಸೂರು ನಗರದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸಪೆಕ್ಟರ್‍ ರುಗಳು, ವಿಭಾಗದ ಎ.ಸಿ.ಪಿ.ಗಳು ಹಾಜರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: