ಮೈಸೂರು

ಶ್ರೀನಿವಾಸ್ ಪ್ರಸಾದ್ ಕ್ಷೇತ್ರದ ಜನತೆಯ ಪರ ಕಾಳಜಿ ತೋರಿಲ್ಲ: ಎಸ್. ರಾಜೇಶ್ ಆರೋಪ

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಒಮ್ಮೆಯೂ ಕ್ಷೇತ್ರದ ಕುಂದು ಕೊರತೆ ಆಲಿಸಲು ಪ್ರವಾಸ ಕೈಗೊಂಡಿಲ್ಲದ ಕಾರಣ ಅವರನ್ನು ಮಂತ್ರಿ ಪದವಿಯಿಂದ ಕೈಬಿಡಲಾಗಿದೆ ಎಂದು ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಎಸ್.ರಾಜೇಶ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಕಚೇರಿಯಲ್ಲಿ  ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಟಿಯ ಅಧ್ಯಕ್ಷ ಎಸ್. ರಾಜೇಶ್ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಅವರು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನಗರದ 65 ವಾರ್ಡ್ ಗಳಲ್ಲಿ ಒಂದು ಬಾರಿಯೂ ನಗರದ ಅಭಿವೃದ್ಧಿ ಮತ್ತು ಕುಂದುಕೊರತೆಯ  ಬಗ್ಗೆ ಪ್ರವಾಸ ಕೈಗೊಳ‍್ಳಲಿಲ್ಲ. ದಲಿತ ಮಂತ್ರಿಯಾಗಿ ಹಿಂದುಳಿದ ಮತ್ತು ದಲಿತ ಪ್ರದೇಶಗಳಿಗೂ ಅಧಿಕೃತ ಪ್ರವಾಸ ಕೈಗೊಳ್ಳಲಿಲ್ಲ. ಗಾಂಧಿ ನಗರದ ಮಾರುಕಟ್ಟೆ ಅವ್ಯವಸ್ಥೆಯ ಬಗ್ಗೆ  ಮನವಿ ಸಲ್ಲಿಸಿದರೂ ಅದರ ಬಗ್ಗೆ ಕಾಳಜಿ ತೋರಲಿಲ್ಲ ಎಂದು ಆರೋಪಿಸಿದರು.

ಶ್ರೀನಿವಾಸ್ ಪ್ರಸಾದ್ ಅವರು ಮಂತ್ರಿ ಸ್ಥಾನವನ್ನು ನಿಭಾಯಿಸುವಲ್ಲಿ ಅಸಮರ್ಥರಾಗಿದ್ದರಿಂದ, ಜನರ ಕುಂದುಕೊರತೆಗಳನ್ನು ಅರ್ಥಮಾಡಿಕೊಳ್ಳದೇ ಬೇಜವಾಬ್ದಾರಿತನದಿಂದ ವರ್ತಿಸಿದ್ದರಿಂದ ಅವರನ್ನು ಮಂತ್ರಿ ಸ‍್ಥಾನದಿಂದ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಅ‍ಧಿಕಾರ ಕೊಟ್ಟ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ,  ಅಧಿಕಾರ ವ್ಯಾಮೋಹಕ್ಕಾಗಿ ತತ್ವ ಸಿದ್ದಾಂತಗಳನ್ನು ಬಲಿಕೊಟ್ಟು ಕೋಮುವಾದಿ ಬಿ.ಜೆ.ಪಿ ಪಕ್ಷವನ್ನು ಸೇರಹೊರಟಿದ್ದಾರೆ ಎಂದು ತೀವ್ರವಾಗಿ ಖಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯಕರ್ತರಾದ ಸಂದೀಪ್, ಕುಮಾರ್, ಸುರೇಶ್ ಹಾಜರಿದ್ದರು.

Leave a Reply

comments

Related Articles

error: