ಮೈಸೂರು

ಶಾಸಕ ಎಸ್ ಎ ರಾಮದಾಸ್ ಜೆ.ಪಿ.ನಗರ ಪ್ರದೇಶಕ್ಕೆ ಭೇಟಿ : ಸಮಸ್ಯೆ ಆಲಿಕೆ; ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ

ಮೈಸೂರು,ಜು.24:- ಕೃಷ್ಣರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್ ಎ ರಾಮದಾಸ್ ಕೃಷ್ಣರಾಜ ಕ್ಷೇತ್ರದ ಹಿಂದಿನ 12 ನೇ ವಾರ್ಡ್ ಅಂದರೆ ಇಂದು 63  ನೇ ವಾರ್ಡ್ ಆಗಿ ಪರಿವರ್ತನೆ ಆಗಿರುವ ಜೆ.ಪಿ.ನಗರ  ಪ್ರದೇಶಕ್ಕೆ ಪಾದಯಾತ್ರೆ ಮೂಲಕ ತೆರಳಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಅಕ್ಕಮಹಾದೇವಿ ರಸ್ತೆಯನ್ನು 6 ವರ್ಷಗಳ ಹಿಂದೆ ಯೋಜನೆ ರೂಪಿಸಲಾಗಿತ್ತು ಆದರೆ ಯಾವುದೇ ಕಾಮಗಾರಿ ಆಗದೆ ಇರುವ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಮಾಣ ಮಾಡಿದ್ದ ಹಾಗೆ ಅಕ್ಕ ಮಹಾದೇವಿರಸ್ತೆಯ ಕಾಮಗಾರಿಯನ್ನು ಶೀಘ್ರದಲ್ಲೇ ಮುಗಿಸಲು ಸೂಚಿಸಿದರು. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ತಕ್ಷಣದಲ್ಲಿಯೇ ಕೆಲಸ ನಿರ್ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಪೊಲೀಸ್ ಸ್ಟೇಷನ್ ಬಳಿ ಇರುವ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಸಂಜೆಯ ಸಮಯದಲ್ಲಿ ಫುಟ್ ಪಾತ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಫಾಸ್ಟ್ ಫುಡ್ ಗಳ ಬಳಿ ವಾಹನಗಳ ನಿಲುಗಡೆಯಿಂದ ತುಂಬ ತೊಂದರೆ ಆಗುತ್ತಿದ್ದು ಸರ್ಕಲ್  ಅಭಿವೃದ್ಧಿ  ಮಾಡಲು ಜನಸಾಮಾನ್ಯರ ಬೇಡಿಕೆ ಬಂದಿದೆ. ನಾಲ್ಕು ರಸ್ತೆಗಳು ಸೇರಿರುವ ಈ ವೃತ್ತದಲ್ಲಿ ಏನು ಮಾಡಬಹುದೆಂದು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

ಬೀದಿ ಬದಿ ವ್ಯಾಪಾರಿಗಳು ಫುಟ್ ಪಾತ್ ನಲ್ಲಿ ತರಕಾರಿಗಳನ್ನು ಮತ್ತು ಬೇರೆ ಬೇರೆ ತ್ಯಾಜ್ಯ  ವಸ್ತುಗಳನ್ನು ಅಲ್ಲಲ್ಲೇ ಎಸೆದು ಹೋಗುತ್ತಿದ್ದಾರೆ. ಅದರಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆ ಎಂದು ದೂರುಗಳು ಕೇಳಿಬಂತು. ಇದಿಕ್ಕೆ ಸ್ಪಂದಿಸಿದ ಶಾಸಕರು ಜೆ ಪಿ ನಗರ ಪ್ರದೇಶವನ್ನು ಮಾದರಿ ವಾರ್ಡಾಗಿ ಪರಿವರ್ತಿಸಿ ಎಲ್ಲೆಲ್ಲಿ ತರಕಾರಿ ವ್ಯಾಪಾರ ಮಾಡುತಿದ್ದಾರೆ, ಎಲ್ಲೆಲ್ಲಿ ಬೀದಿಬದಿ ವ್ಯಾಪಾರಿಗಳು ಇದ್ದಾರೆ ಅವರಿಗೆ ಒಂದು ಕಸ ಸಂಗ್ರಹ ಮಾಡುವ ಡಬ್ಬಿಯನ್ನು ಕೊಟ್ಟು ಅದರಲ್ಲಿ ತ್ಯಾಜ್ಯ ವಸ್ತುಗಳನ್ನು ಸುರಿಯಲು ಸೂಚನೆ ನೀಡಿದರು.

ಜೆಪಿನಗರ ತಗ್ಗು ಪ್ರದೇಶದಲ್ಲಿ ಇರುವುದರಿಂದ ಹೊರ ವರ್ತುಲ ರಸ್ತೆ ಎತ್ತರದಲ್ಲಿರುವುದರಿಂದ ಸಂಪರ್ಕದ ತೊಂದರೆಯಿದ್ದು ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಸಂಪರ್ಕ ಕಲ್ಪಿಸುವ ದೃಷ್ಟಿಯಲ್ಲಿ ಸೂಕ್ತ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಲು ತಿಳಿಸಲಾಗಿದೆ ಎಂದು ತಿಳಿಸಿದರು.

ಜೆಪಿನಗರದ ಕೆಲವು ಪ್ರದೇಶದಲ್ಲಿ  ಮಕ್ಕಳು ಪೆಟ್ರೋಲ್ ಕದಿಯುವುದು, ಮಾದಕ ದ್ರವ್ಯ ಸೇವನೆ ಕುರಿತಂತೆ ದೂರು, ಇನ್ನೂ ಹಲವು ಸಮಸ್ಯೆಗಳನ್ನು ಜನತೆ ಶಾಸಕರ ಮುಂದೆ ತೆರೆದಿರಿಸಿದ್ದು, ಶಾಸಕರು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: