ಮೈಸೂರು

ಬರಪೀಡಿತ ಪ್ರದೇಶಗಳ ಜನರ ಬವಣೆ ಕೇಳುವವರಿಲ್ಲ: ಜೆಡಿಎಸ್ ಆರೋಪ

ಬೈಲಕುಪ್ಪೆ: ಬರ ಆವರಿಸಿ ಜನಜಾನುವಾರುಗಳಿಗೆ ಕುಡಿಯಲು ನೀರು, ಆಹಾರ ಪದಾರ್ಥ, ಮೇವು ಇಲ್ಲದೆ ಪರಿತಪಿಸುತ್ತಿದ್ದರೂ ಕ್ಷೇತ್ರದ ಶಾಸಕ ಯಾವುದೇ ರೀತಿ ಕ್ರಮ ವಹಿಸುತ್ತಿಲ್ಲ ಎಂದು ತಾಲೂಕು ಜೆ.ಡಿ.ಎಸ್  ಪ್ರಧಾನ ಕಾರ್ಯದರ್ಶಿ ಕೆ.ಮಹದೇವ್ ಆರೋಪಿಸಿದರು.

ತಾಲೂಕಿನ ಗಿರಗೂರು ಗ್ರಾಮದಲ್ಲಿ ಜಿ.ಪಂ. ಅನುಧಾನದಡಿಯಲ್ಲಿ 1.5 ಲಕ್ಷ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಜಾನುವಾರುಗಳಿಗೆ ಗೋಶಾಲೆಗಳನ್ನು ತೆರೆಯುವ ಮೂಲಕ ಮೇವು ಖರೀದಿಸಿ ಮೇವಿನ ಕೊರತೆಯನ್ನು ನೀಗಿಸಬೇಕಾಗಿದೆ. ಆದರೆ ಶಾಸಕರು ಮತ್ತು ರಾಜ್ಯದ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರವಾಗಿದೆ ಎಂದು ತಿಳಿಸಿದರು.

ಹಾರಂಗಿ ಜಲಾಶಯದ ಅಚ್ಚುಕಟ್ಟಿಗೆ ಬರುವ ಅರಕಲಗೂಡು, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ಇತರ ತಾಲೂಕುಗಳಿಗೆ ಸಮರ್ಪಕವಾಗಿ ನೀರು ಹರಿಸದೇ ಇರುವ ಕಾರಣ ಭತ್ತದ ಬೆಳೆಗೆ ತೊಂದರೆಯಾಗಿದ್ದು ಈ ಬಗ್ಗೆ ಮೈಸೂರಿನ ಜಿಲ್ಲಾ ಕಛೇರಿ ಎದುರು ಕೆ.ಆರ್. ನಗರ ಶಾಸಕರಾದ ಸಾ.ರಾ. ಮಹೇಶ್ ಸೇರಿದಂತೆ ಜೆ.ಡಿ.ಎಸ್ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ಮಾಡಿದರು.

ಆದರೆ ರೈತರಿಗೆ ನೀರು ಪೂರೈಸುವಲ್ಲಿ ವಿಫಲವಾಗಿರುವ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದಿಎ. ಉಸ್ತುವಾರಿ ಸಚಿವರಾಗಲಿ, ಸರ್ಕಾರದ ಪ್ರತಿನಿಧಿಯಾಗಲಿ ಈ ವರೆಗೂ ಭೇಟಿ ನೀಡಿಲ್ಲ ಎಂದು ತಿಳಿಸಿದರು.

ಜಿ.ಪಂ. ಸದಸ್ಯರು ತಮ್ಮಗೆ ಬರುವ ಅನುದಾನದಲ್ಲಿ ತುರ್ತಾಗಿ ಆಗಬೇಕಾಗಿರುವ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಮಾಡಿಕೊಡಲು ಮುಂದಾಗಬೇಕು. ಕಾಡಂಚಿನ ಗ್ರಾಮಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನಕ್ಕೆ ಶಿಫಾರಸು ಮಾಡಬೇಕೆಂದು ಕೋರಿದರು.

ಜಿ.ಪಂ. ಸದಸ್ಯ ವಿ.ರಾಜೇಂದ್ರ ಮಾತನಾಡಿ, ಈಗಿರುವ ಅನುದಾನದಲ್ಲಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಡಾಂಬಾರಿಕರಣಕ್ಕೂ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆ.ಡಿ.ಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಎನ್. ರವಿ, ಗ್ರಾ.ಪಂ. ಉಪಾಧ್ಯಕ್ಷ ಶಫಿಉಲ್ಲಾ ಖಾನ್, ಸದಸ್ಯರಾದ ಚಂದ್ರಶೇಖರ್, ಜಯಮ್ಮ, ಬೈಲಕುಪ್ಪೆ ಗ್ರಾಪಂ ಸದಸ್ಯ ಕೇಬಲ್ ದಿನೇಶ್, ಯಶ್ವಂತ್‌ ಕುಮಾರ್, ಮತ್ತಿತರರು ಹಾಜರಿದ್ದರು.

ವರದಿ: ರಾಜೇಶ್

Leave a Reply

comments

Related Articles

error: