
ಮೈಸೂರು
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಚನ್ನಣ್ಣನವರ್
ಮೈಸೂರಿನ ಸೌತ್ ಪೊಲೀಸ್ ಠಾಣೆ (ಗ್ರಾಮಾಂತರ) ಯ ಕಟ್ಟಡದ ಸುತ್ತ ಕಂಪೌಂಡ್ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.
ಮೈಸೂರಿನ ಗ್ರಾಮಾಂತರ ಠಾಣೆಯ ಸುತ್ತ ಕಂಪೌಂಡ್ ಇರಲಿಲ್ಲ. ಹಾಗೂ ಠಾಣೆಗೆ ಬಂದವರಿಗೆ ಕುಳಿತುಕೊಳ್ಳಲು ಸ್ಥಳವಿರಲಿಲ್ಲ. ಶೌಚಾಲಯ ವ್ಯವಸ್ಥೆಯೂ ಇರಲಿಲ್ಲ. ಅವುಗಳನ್ನೆಲ್ಲ ನಿರ್ಮಿಸಲು ಪೊಲೀಸ್ ವರಿಷ್ಠಾಧಿಕಾರಿಗಳು ಮುಂದಾಗಿದ್ದು, ಇದೀಗ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಈ ಸಂದರ್ಭ ಹೆಚ್ಚುವರಿ ಅಧೀಕ್ಷಕಿ ಕಲಾ ಕೃಷ್ಣಮೂರ್ತಿ, ಡಿವೈಎಸ್ಪಿ ವಿಕ್ರಂ ಆಮಟಿ, ಸೌತ್ ಠಾಣೆಯ ಸಬ್ ಇನ್ಸಪೆಕ್ಟರ್ ಜಯಪ್ರಕಾಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಟ್ಟಡದ ಸುತ್ತ ಗಾರ್ಡನ್ ನಿರ್ಮಿಸಿ, ಅಲ್ಲಿಯೇ ಹತ್ತಿರದಲ್ಲಿ ಪೊಲೀಸ್ ಕ್ವಾರ್ಟರ್ಸ್ ಗಳಿದ್ದು ಅಲ್ಲಿನ ಮಕ್ಕಳಿಗೆ ಅರಿವು ಮೂಡಿಸಲು ಮೈದಾನ, ಗ್ರಂಥಾಲಯ, ಸಿಬ್ಬಂದಿಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಸ್ವಾಗತ ಕೌಂಟರ್, ಟಿವಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುದ್ದಿ ಪತ್ರಿಕೆಗಳ ವಲಯ, ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದ್ದು, ಕಾಫಿ, ಹಾಗೂ ಟೀ ವ್ಯವಸ್ಥೆಗೆ ಯಂತ್ರಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.