ಮೈಸೂರು

ದಲಿತರ ಭೂಮಿಗಳ ಉಳಿವಿಗಾಗಿ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ

ಮೈಸೂರು,ಜು.25:- ದಲಿತರ ಭೂಮಿಗಳ ಉಳಿವಿಗಾಗಿ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ವೀಳ್ಯದೆಲೆ ರೈತರ ಭೂ ಹೋರಾಟ ಸಮಿತಿ ವತಿಯಿಂದ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ಕೋರ್ಟ್ ಆವರಣದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕದಲ್ಲಿ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ 1976ಅಡಿ ಕಳೆದ 40 ವರ್ಷಗಳಿಂದಲೂ ದೌರ್ಜನ್ಯಕ್ಕೆ ತುತ್ತಾಗಿರುವ 245 ವೀಳ್ಯದೆಲೆ ಬೆಳೆಗಾರರಿಗೆ ಮೈಸೂರು ಮಹಾನಗರ ಪಾಲಿಕೆಯು ಕೂಡಲೇ ಹಕ್ಕು ಪತ್ರ ವಿತರಿಸುವಂತೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು. ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ ಪರಭಾರೆ ನಿಷೇಧ ಕಾಯ್ದೆ 1976ರನ್ನು ಸಂಪೂರ್ಣ ಉಲ್ಲಂಘಿಸಿ 4ಉಪಕಲಂ (1)ಮತ್ತು (1)ಎ(1)ಬಿ ಪ್ರಕಾರ ಅಕ್ರಮವಾಗಿ ನೋಂದಣಿಯಾಗಿರುವ ಕ್ರಯಗೊಂಡಿರುವ ಹಾಗೂ ನ್ಯಾಯಾಲಯದ ತಕರಾರಿನಲ್ಲಿರುವ ಎಲ್ಲಾ ದಲಿತರ ಭೂಮಿಯನ್ನು ಜಿಲ್ಲಾಧಿಕಾರಿಗಳು ವಜಾಗೊಳಿಸಿ ಅವರಿಗೆ ಮರುಗೇಣಿದಾರರಾಗಿ ಮಾಡಿ ಆದೇಶ ಹೊರಡಿಸಬೇಕು. 2006-07 ಸುತ್ತೋಲೆ ಆರ್ ಎನ್ ಜಿ 259ರನ್ವಯ ಕೃಷಿ ಭೂಮಿಯನ್ನು ಪರಿವರ್ತನೆ ಮಾಡದೆ ಮಾರಾಟ ಮಾಡುವಂತಿಲ್ಲ. ಅಂತಹ ಕೃತ್ಯಗಳಲ್ಲಿ ಮೂರು ವರ್ಷ ಜೈಲು ಹಾಗೂ 10ಸಾವಿರ ದಂಡ ವಿಧಿಸುವ ಶಿಕ್ಷೆಯಿದ್ದು, ವೀಳ್ಯದೆಲೆ ತೋಟಗಳಲ್ಲಿ ನಡೆದಿರುವ ಇಂತಹ ಅಕ್ರಮಗಳನ್ನು ಜಿಲ್ಲಾಡಳಿತ ಕ್ರಮಕ್ಕೆ ಒಳಪಡಿಸಬೇಕು. ಮೈಸೂರು ನಗರದ ವೀಳ್ಯದೆಲೆ ಭೂಮಿಗಳಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಕರ್ನಾಟಕ ಮುನ್ಸಿಪಲ್ ಕಾಯ್ದೆ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಖಾಸಗಿ ಕಟ್ಟಡಗಳನ್ನು ಕೂಡಲೇ ಜಿಲ್ಲಾಡಳಿತವು ತೆರವುಗೊಳಿಸಬೇಕು. ದಲಿತರ ವೀಳ್ಯದೆಲೆ ಭೂಮಿಯನ್ನು ಖರೀದಿಸಿರುವ ಹಾಗೂ ಅತಿಕ್ರಮಿಸಿಕೊಂಡಿರುವ ಭೂಮಾಫಿಯಾದವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸುಮಾರು 25 ಮಂದಿಗೆ ಚಿಕ್ಕ ಕಾಟೂರಿನಲ್ಲಿ ಬದಲಿ ಭೂಮಿ ನೀಡಿರುವ ಸರ್ಕಾರ ಸದರಿ ಭೂಮಿಯಲ್ಲಿರುವ ಅತಿಕ್ರಮಣಕಾರರನ್ನು ತೆರವುಗೊಳಿಸಿ ವೀಳ್ಯದೆಲೆ ಬೆಳೆಗಾರರಿಗೆ ಬೆಳೆಬೆಳೆಯಲು ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಸಂಚಾಲಕ ಶಂಭೂಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ವೆಂಕಟೇಶ್, ಪಿ.ಕುಮಾರ್, ಚಳವಳಿ ಚಿದು, ವಿಜಯ್ ಶಂಕರ್, ಪರಮೇಶ್ವರ್, ರಾಮರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: