ಪ್ರಮುಖ ಸುದ್ದಿ

ಆಸ್ತಿ ವಿವರ ಸಲ್ಲಿಸದೇ ಲೋಕಾಯುಕ್ತ ಕಾಯ್ದೆ ಉಲ್ಲಂಘಿಸಿದ 92 ಮಂದಿ ಶಾಸಕರು

ರಾಜ್ಯ(ಬೆಂಗಳೂರು)ಜು.26:-ಲೋಕಾಯುಕ್ತ ಸಂಸ್ಥೆ ಬಲಪಡಿಸುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಜೆಡಿಎಸ್‌, ಬಿಜೆಪಿ ಪಕ್ಷಗಳು ಹಾಗೂ ಕಾಂಗ್ರೆಸ್‌ಗೆ ಸೇರಿದ 92 ಮಂದಿ ಶಾಸಕರು, 33 ಮಂದಿ ಪರಿಷತ್‌ ಸದಸ್ಯರು ಆಸ್ತಿ ವಿವರ ಸಲ್ಲಿಸದೇ ಲೋಕಾಯುಕ್ತ ಕಾಯ್ದೆ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿ ಅನೇಕ ಹಿರಿಯ ನಾಯಕರು ಗಡುವು ಮುಗಿದ ಬಳಿಕ ಸಲ್ಲಿಸಿದ್ದಾರೆ.

ಸಚಿವರಾದ ಎಚ್‌.ಡಿ. ರೇವಣ್ಣ, ಡಿ.ಸಿ. ತಮ್ಮಣ್ಣ, ಸಿ.ಎಸ್‌. ಪುಟ್ಟರಾಜು, ಜಮೀರ್‌ ಅಹಮ್ಮದ್‌ ಖಾನ್‌, ಬಂಡೆಪ್ಪ ಕಾಶಂಪೂರ, ವೆಂಕಟರಮಣಪ್ಪ, ಎನ್‌.ಮಹೇಶ್‌, ಜಯಮಾಲ, ಶಾಸಕರಾದ ಬಿಜೆಪಿಯ ಬಿ. ಶ್ರೀರಾಮುಲು, ಜೆಡಿಎಸ್‌ನ ಎಚ್‌. ವಿಶ್ವನಾಥ್‌, ಎ.ಟಿ. ರಾಮಸ್ವಾಮಿ, ಕಾಂಗ್ರೆಸ್‌ನ ಡಾ.ಕೆ ಸುಧಾಕರ್‌ ಕೂಡ ಈವರೆಗೂ ಆಸ್ತಿ ವಿವರ ಸಲ್ಲಿಸಿಲ್ಲ. ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರೂ ಇದುವರೆಗೆ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.

ಲೋಕಾಯುಕ್ತ ಕಾಯ್ದೆಯ ಪ್ರಕಾರ, ಪ್ರತಿವರ್ಷ ಜೂ.30ರ ಒಳಗೆ ಆಸ್ತಿ ಮತ್ತು ದಾಯಿತ್ವ ಪ್ರಮಾಣಪತ್ರವನ್ನು ಲೋಕಾಯುಕ್ತ ಸಂಸ್ಥೆಗೆ ನೀಡಬೇಕು. ಆದರೆ, ಈವರೆಗೆ 2017-18ನೇ ಸಾಲಿನಲ್ಲಿ ಆಸ್ತಿ ವಿವರವನ್ನು ಕೆಲಶಾಸಕರು ಸಲ್ಲಿಸಿಲ್ಲ ಎನ್ನಲಾಗಿದೆ.

ಬಿಜೆಪಿಯ 37, ಕಾಂಗ್ರೆಸ್‌ನ 28, ಜೆಡಿಎಸ್‌ನ 25, ಬಿಎಸ್‌ಪಿಯ ಒಬ್ಬ ಶಾಸಕ ಹಾಗೂ ಪಕ್ಷೇತರ ಶಾಸಕ ಸೇರಿ ಒಟ್ಟು 92 ಮಂದಿ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಇನ್ನು ಮೇಲ್ಮನೆ ಸದಸ್ಯರಲ್ಲೂ 33 ಮಂದಿ ಕೂಡ ಇದೇ ಸಾಲಿನಲ್ಲಿ ನಿಂತಿದ್ದಾರೆ. ಮತ್ತೊಂದೆಡೆ 2016-17ನೇ ಸಾಲಿನಲ್ಲಿ ಶಾಸಕರಾಗಿದ್ದ ರಾಜ ವೆಂಕಟಪ್ಪ ನಾಯಕ, ಪರಿಷತ್‌ ಸದಸ್ಯರಾದ ಆರ್‌.ಬಿ. ತಿಮ್ಮಾಪುರ, ಕೆ.ಟಿ. ಶ್ರೀಕಂಠೇಗೌಡ ಕೂಡ ಈವರೆಗೆ ಆಸ್ತಿವಿವರ ಸಲ್ಲಿಸಲು ಆಸಕ್ತಿ ತೋರಿಲ್ಲ ಎನ್ನಲಾಗಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಸಚಿವರಾದ ಜಿ.ಟಿ. ದೇವೆಗೌಡ, ಎನ್‌.ಎಸ್‌. ಶಿವಶಂಕರ ರೆಡ್ಡಿ, ಶಾಸಕರಾದ ಕೆ.ಎಸ್‌. ಈಶ್ವರಪ್ಪ, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ 35 ಶಾಸಕರು ಜೂನ್‌ 30ರ ಗಡುವು ಅವಧಿ ಮುಗಿದ ಬಳಿಕ ಇತ್ತೀಚೆಗೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: